ಸಿರವಾರ: ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಮಾರುತೇಶ್ವರ (ಆಂಜನೇಯ) ಜಾತ್ರೆಯ ಸಂದರ್ಭದಲ್ಲಿ ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿ, ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳ ಮುಖಂಡರು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಅಕ್ಟೋಬರ್ 18ರಂದು ತಿಡಿಗೋಳ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯ ಸಂದರ್ಭದಲ್ಲಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯ ಬಳಿಕ ಗ್ರಾಮದಲ್ಲಿ ದಲಿತ ಸಮುದಾಯದವರು ಭಯದ ವಾತಾವರಣದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ದೊರೆತು 79 ವರ್ಷಗಳು ಕಳೆದರೂ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳು ಮುಂದುವರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಂವಿಧಾನ ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಿದ್ದರೂ ಕೆಲವು ಕಡೆಗಳಲ್ಲಿ ದಲಿತರು ತಮ್ಮ ಹಕ್ಕುಗಳನ್ನು ಚಲಾಯಿಸಲು ಅಡ್ಡಿಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾತ್ರೆಯ ಮೆರವಣಿಗೆಯಲ್ಲಿ ದಲಿತ ಯುವಕರು ಭಾಗವಹಿಸಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ಪ್ರಶ್ನಿಸಿದ ಹುಸೇನಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಹುಸೇನಪ್ಪ ದಲಿತರ ಕೇರಿಯತ್ತ ಓಡಿಹೋದಾಗ ಅವರನ್ನು ಬೆನ್ನಟ್ಟಿದ ಗುಂಪು ಮನೆಗಳ ಬಳಿಗೆ ತೆರಳಿ ದೌರ್ಜನ್ಯ ನಡೆಸಿದೆ ಎಂದು ಮುಖಂಡರು ದೂರಿದರು.
ಘಟನೆಯ ಸಂದರ್ಭದಲ್ಲಿ ಜಗಳವನ್ನು ತಡೆಯಲು ಮುಂದಾದ ಮಹಿಳೆಯರು ಹಾಗೂ ವೃದ್ಧರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಉಪನ್ಯಾಸಕ ತಾಯಪ್ಪ ಹಾಗೂ ಕೆಲವು ವಿದ್ಯಾರ್ಥಿಗಳ ಮೇಲೂ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದರು.
ಘಟನೆ ನಡೆದು ಎರಡು ವಾರಗಳಿಗೂ ಹೆಚ್ಚು ಸಮಯ ಕಳೆದಿದ್ದರೂ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ. ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ ಅವರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಉಂಟಾಗಿರುವ ಭಯದ ವಾತಾವರಣದಿಂದಾಗಿ ಕೆಲವು ದಲಿತ ಕುಟುಂಬಗಳ ಸದಸ್ಯರು ಊರು ತೊರೆದಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿ, ನಿರ್ಭಯವಾಗಿ ಗ್ರಾಮದಲ್ಲಿ ವಾಸಿಸಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಿಡಿಗೋಳ ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹೇರಿರುವ ಆರೋಪಗಳ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಸಬೇಕು. ಇದರೊಂದಿಗೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪಗಳ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತ ಸಮುದಾಯದವರಿಗೆ ನ್ಯಾಯ ದೊರಕಿಸಿಕೊಡುವುದು ಹಾಗೂ ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 11ರಂದು ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಿಡಿಗೋಳ ಗ್ರಾಮದವರೆಗೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಬಳಿಕ ತಿಡಿಗೋಳ ಗ್ರಾಮದಲ್ಲಿ ಬೆಳಿಗ್ಗೆ 11 ಗಂಟೆಗೆ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ತ್ವರಿತ ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಹುಜನ ಸಮಾಜದ ಮುಖಂಡ ಬಸವರಾಜ ಭಂಡಾರಿ, ದಲಿತ ಮುಖಂಡರಾದ ಬಡ್ಡ ಹನುಮಂತ, ವಿಜಯರಾಣಿ, ಅರಳಪ್ಪ, ಸವಾರೆಪ್ಪ, ಶ್ಯಾಮುಲೆಪ್ಪ ನ್ಯಾಯಬೆಲೆ ಅಂಗಡಿ, ಮಲ್ಲಪ್ಪ, ಜಯಪ್ಪ, ಗ್ಯಾನಪ್ಪ, ಮಲ್ಲಪ್ಪ ನಾರಬಂಡಾ, ಎಂ. ಮನೋಹರ, ದಾನಪ್ಪ, ರಾಮಣ್ಣ ಮೇಸ್ತ್ರಿ, ಮೇಷಾಕ್ ಕೆಂಪು, ಯೇಸುಮಿತ್ರ, ಕರಿಯಪ್ಪ, ಮೌನೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.



