ಲಿಂಗಸುಗೂರು: ಪಟ್ಟಣದ ಮಸೀದಿ ಸಮಿತಿಗಳ ಆಡಳಿತ, ಹಣಕಾಸು ವ್ಯವಹಾರ ಹಾಗೂ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಕುರಿತು ತನಿಖೆ ನಡೆಸುವಂತೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ವಕ್ಫ್ ಮಂಡಳಿಯು ಲಿಂಗಸುಗೂರು ಪುರಸಭೆ ವ್ಯಾಪ್ತಿಯ 13 ಮಸೀದಿ ಸಮಿತಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಅಂಜುಮನ್-ಎ-ಮುಸ್ಲಿಮೀನ್ ಲಿಂಗಸುಗೂರು ತಾಲೂಕು ಸಮಿತಿಯು ಅಕ್ಟೋಬರ್ 15ರಂದು ಜಿಲ್ಲಾ ವಕ್ಫ್ ಮಂಡಳಿಗೆ ದೂರು ಸಲ್ಲಿಸಿ, ಮಸೀದಿ ಸಮಿತಿಗಳ ಆಡಳಿತಾತ್ಮಕ ಕಾರ್ಯವೈಖರಿ, ಆರ್ಥಿಕ ವ್ಯವಹಾರಗಳು ಹಾಗೂ ವಕ್ಫ್ ಆಸ್ತಿಗಳ ಸಂರಕ್ಷಣೆಯ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ಒತ್ತಾಯಿಸಿತ್ತು.

ಅಲ್ಲದೆ, ಸಮುದಾಯದ ಹಿತದೃಷ್ಟಿಯಿಂದ ಅಂಜುಮನ್ ಸಮಿತಿ ಕೈಗೊಳ್ಳುವ ಸಾಮಾಜಿಕ ಕಾರ್ಯಕ್ರಮಗಳ ಘೋಷಣೆಗಳು ಮತ್ತು ಪ್ರಕಟಣೆಗಳಿಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ದೂರನ್ನು ಪರಿಗಣಿಸಿರುವ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳು ನವೆಂಬರ್ 12ರಂದು ಸಂಬಂಧಪಟ್ಟ 13 ಮಸೀದಿ ಸಮಿತಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ನವೆಂಬರ್ 19ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಸಭೆಗೆ ಎಲ್ಲ ಸಮಿತಿಗಳ ಪದಾಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಂಜುಮನ್ ಸಮಿತಿಯ ಗೌರವಾಧ್ಯಕ್ಷ ಅನ್ಸರುದ್ದಿನ್, ವಕ್ಫ್ ಆಸ್ತಿಗಳು ಸಮುದಾಯದ ಅಮೂಲ್ಯ ಧಾರ್ಮಿಕ ಮತ್ತು ಸಾರ್ವಜನಿಕ ಆಸ್ತಿಗಳಾಗಿದ್ದು, ಅವುಗಳ ನಿರ್ವಹಣೆಯಲ್ಲಿ ಹೊಣೆಗಾರಿಕೆ ಹಾಗೂ ಪಾರದರ್ಶಕತೆ ಅತ್ಯಗತ್ಯವಾಗಿದೆ ಎಂದರು.

ಯಾವುದೇ ವ್ಯಕ್ತಿ ಅಥವಾ ಸಮಿತಿಯ ವಿರುದ್ಧ ವೈಯಕ್ತಿಕ ದ್ವೇಷದಿಂದ ದೂರು ಸಲ್ಲಿಸಿಲ್ಲ. ವಕ್ಫ್ ಆಸ್ತಿಗಳ ರಕ್ಷಣೆ, ಮಸೀದಿಗಳ ಸಮರ್ಪಕ ಆಡಳಿತ ಹಾಗೂ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ಮಂಡಳಿಯ ಕ್ರಮವನ್ನು ಸ್ವಾಗತಿಸಿದ ಅವರು, ಆರೋಪಗಳ ಸತ್ಯಾಸತ್ಯತೆಯನ್ನು ಯಾವುದೇ ಒತ್ತಡ ಅಥವಾ ಪಕ್ಷಪಾತವಿಲ್ಲದೆ ಪರಿಶೀಲಿಸಬೇಕು. ತನಿಖೆಯಲ್ಲಿ ತಪ್ಪುಗಳು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.