ನೆಲಮಂಗಲ: ಕರ್ನಾಟಕ ಕನ್ನಡ ಸಾಹಿತ್ಯ ಲೋಕ ನೆಲಮಂಗಲ ವತಿಯಿಂದ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಹಾಗೂ ‘ಅಕ್ಷರಯಜ್ಞ ತಪಸ್ವಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಕಳೆದ ಭಾನುವಾರ ಅದ್ದೂರಿಯಾಗಿ ನಡೆಯಿತು.
ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯಾಶೀರ್ವಾದದೊಂದಿಗೆ ನಡೆದ ಕಾರ್ಯಕ್ರಮವನ್ನು ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಉದ್ಘಾಟಿಸಿದರು. ನೆಲಮಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ವೀರಸಾಗರ ಭಾನುಪ್ರಕಾಶ್ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು, ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮ್ಮೇಳನ ಸಾಹಿತ್ಯಮಯ ವಾತಾವರಣಕ್ಕೆ ಸಾಕ್ಷಿಯಾಯಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 149 ಕವಿಗಳಿಗೆ ವೇದಿಕೆಯಲ್ಲಿ ತಮ್ಮ ಕವನಗಳನ್ನು ವಾಚಿಸಲು ಅವಕಾಶ ಕಲ್ಪಿಸಲಾಗಿತ್ತು. ಕರ್ನಾಟಕ ಕನ್ನಡ ಸಾಹಿತ್ಯ ಲೋಕದ ಸಂಸ್ಥಾಪಕ ಪ್ರಜಾಕವಿ ನಾಗರಾಜು ಅವರ ಸಂಪಾದಕತ್ವದಲ್ಲಿ ಎಲ್ಲ ಕವಿಗಳ ಕವನಗಳನ್ನು ಸಂಗ್ರಹಿಸಿ ‘ಅಕ್ಷರಯಜ್ಞ ತಪಸ್ವಿಗಳು’ ಕೃತಿಯಾಗಿ ಪ್ರಕಟಿಸಲಾಗಿದ್ದು, ಅದೇ ವೇದಿಕೆಯಲ್ಲಿ ಕವಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ‘ನನ್ನವಳಿಗಾಗಿ ನೂರು ಕವನಗಳು’, ‘ಓಟಿನ ಮಹತ್ವ’ ಹಾಗೂ ಸಣ್ಣಕಥೆಗಳ ಕೃತಿಗಳನ್ನೂ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸಿ. ಸೋಮಶೇಖರ್ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ಸೇವಾಕಾಂಕ್ಷಿಯಾಗಿರುವ ಅವರು, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೈಗೊಳ್ಳಬೇಕೆಂದಿರುವ ವಿವಿಧ ಯೋಜನೆಗಳ ಕುರಿತು ಮಾತನಾಡಿದರು. ವಿಶೇಷವಾಗಿ ಮಹಿಳಾ ಸಾಹಿತಿಗಳಿಗೆ ಕಲ್ಪಿಸಬಹುದಾದ ಸೌಲಭ್ಯಗಳ ಕುರಿತು ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಕೆ.ಎಸ್. ಹೆಗಡೆ ಕೇಳಿದ ಪ್ರಶ್ನೆಗೆ ಅವರು ತಮ್ಮ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಲೋಕದ ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಕೆ.ಎಸ್. ಹೆಗಡೆ ಅವರು ಸಂಸ್ಥೆಯ ಹುಟ್ಟು, ಬೆಳವಣಿಗೆ, ಸಂಸ್ಥಾಪಕರ ಪರಿಚಯ ಹಾಗೂ ಈವರೆಗೆ ಕೈಗೊಂಡ ಸಾಹಿತ್ಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಯೋಜನೆಗಳನ್ನೂ ವಿವರಿಸಿದ ಅವರು, ಕವನ ವಾಚಿಸಿದ ಕವಿಗಳನ್ನು ಅಭಿನಂದಿಸಿ ‘ನಾವು ಬೆಳೆಯೋಣ, ನಮ್ಮವರನ್ನು ಬೆಳೆಸೋಣ’ ಎಂಬ ಸಂಸ್ಥೆಯ ಧ್ಯೇಯವನ್ನು ಸ್ಮರಿಸಿದರು.
‘ಅಕ್ಷರಯಜ್ಞ ತಪಸ್ವಿಗಳು’ ಕೃತಿಗೆ ಬೆನ್ನುಡಿ ಬರೆದ ರಾಜ್ಯಾಧ್ಯಕ್ಷ ಹನುಮಂತರಾಯಪ್ಪ ಪಿ.ಕೆ. ಕೃತಿಯ ಆಶಯ ಹಾಗೂ ಮಹತ್ವವನ್ನು ವಿವರಿಸಿದರು. ಮುನ್ನುಡಿ ಬರೆದ ಬೈಲಪ್ಪ ದೊಡ್ಡೇರಿ ಹಾಗೂ ಪ್ರೊ. ಬೋಗಣ್ಣ ಅವರು ಕೃತಿಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಕನ್ನಡ ಚಳವಳಿ ಹೋರಾಟಗಾರ ಪಾಲನೇತ್ರ ಸೇರಿದಂತೆ ವಿವಿಧ ಅತಿಥಿಗಳು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರದ ಕುರಿತು ಮಾತನಾಡಿದರು.
ಶ್ರೀಮತಿ ವೀಣಾ ಮತ್ತು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಡಾ. ಶಿವಲಿಂಗಯ್ಯ ಸ್ವಾಗತಿಸಿದರು. ಡಾ. ರೇಣುಕಾ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ವೆಂಕಟೇಶ್ ಆರ್. ಚೌತಾಯಿ ನಿರ್ವಹಿಸಿದರು.
ಎಂ. ನಾರಾಯಣಗೌಡ, ಅನಂತರಾಮು ಬಿ.ಎಲ್., ಡಾ. ಕಿರಣ್ ಕುಮಾರ್, ಆರ್. ವಲ್ಲೀಶ್ ಬಾಬು, ಬಿ.ಎಸ್. ರವಿಶಂಕರ್ ಗೌಡ, ಬೂದಿಹಾಳ ಕಿಟ್ಟಿ, ಪ್ರೊ. ಬಿ.ಎಂ. ಕೃಷ್ಣಪ್ಪ, ಬಿ.ಆರ್. ತಿಮ್ಮರಾಜು, ದ್ವಾರನಕುಂಟೆ ದೇವರಾಜ್, ಶ್ರೇಯಸ್ ಎಸ್., ಶಿವಪ್ರಸಾದ್ ಆರಾಧ್ಯ, ಡಿ. ಸಿದ್ದರಾಜು, ಕೆ.ವಿ. ಸದಾನಂದ ಆರಾಧ್ಯ, ಸಿರಾಜ್ ಅಹಮದ್ ಸೊರಬ, ಗಝಲ್ ಕವಿ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳಿಗೆ ವಸತಿ, ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಕವನ ವಾಚಿಸಿದ ಪ್ರತಿಯೊಬ್ಬ ಕವಿಗೂ ಸನ್ಮಾನಿಸಿ, ಅವರ ಕವನ ಒಳಗೊಂಡ ‘ಅಕ್ಷರಯಜ್ಞ ತಪಸ್ವಿಗಳು’ ಕೃತಿಯ ಪ್ರತಿಯನ್ನು ನೀಡಲಾಯಿತು. ಮಕ್ಕಳ ನೃತ್ಯ ಹಾಗೂ ಕವಿಗಳ ಗಾಯನ ಕಾರ್ಯಕ್ರಮಗಳು ಸಾಹಿತ್ಯಾಸಕ್ತರಿಗೆ ಮನರಂಜನೆ ನೀಡಿದವು.
ಕೊನೆಯಲ್ಲಿ ಪ್ರಜಾಕವಿ ನಾಗರಾಜು ಅವರು ಗಣ್ಯರು, ಕವಿಗಳು, ಸಂಸ್ಥೆಯ ಪದಾಧಿಕಾರಿಗಳು, ಸಂಘಟಕರು, ಹಿತೈಷಿಗಳು ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಅಕ್ಷರಯಜ್ಞ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಎಳೆಯಲಾಗಿದ್ದು, ಮುಂದಿನ ದಾಸ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
