ಲಿಂಗಸುಗೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನವೆಂಬರ್ 2ರಿಂದ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆ ಆಯೋಜಿಸಲಾಗಿದ್ದು, ಅಂತಿಮ ಹಂತದ ಸ್ಪರ್ಧೆಯನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆಸಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕ ಚಾಮರಾಜ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಸುಗೂರಿನ ಒಡೆಯರ್ ಮೆಲೋಡಿಸ್ ಹಾಗೂ ರೋಜಾ ಇವೆಂಟ್ಸ್ ವತಿಯಿಂದ ‘ಎದೆ ತುಂಬಿ ಹಾಡುವೆನು ಸೀಸನ್-1’ ಹೆಸರಿನಲ್ಲಿ ರಾಜ್ಯಮಟ್ಟದ ಬೃಹತ್ ಕರೋಕೆ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನವೆಂಬರ್ 2ರಿಂದ ಗದಗ, ರಾಯಚೂರು, ಮಾನ್ವಿ, ಸಿಂಧನೂರು, ಶಹಾಪುರ, ದೇವದುರ್ಗ, ಗಂಗಾವತಿ ಹಾಗೂ ಮಸ್ಕಿ ಸೇರಿದಂತೆ ವಿವಿಧೆಡೆ ಸ್ಪರ್ಧೆಗಳು ನಡೆಯಲಿವೆ. ಅಂತಿಮ ಹಂತದ ಸ್ಪರ್ಧೆಯನ್ನು ಲಿಂಗಸುಗೂರಿನಲ್ಲಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಗಾಯನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವ ಸ್ಪರ್ಧಿಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಆಸಕ್ತರು ನಿಗದಿತ ಪ್ರವೇಶ ಶುಲ್ಕ ಪಾವತಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಚಲನಚಿತ್ರ ಗೀತೆಗಳು, ಭಕ್ತಿಗೀತೆಗಳು, ಭಾವಗೀತೆಗಳು ಹಾಗೂ ಜನಪದ ಗೀತೆಗಳನ್ನು ಹಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ ₹20 ಸಾವಿರ, ದ್ವಿತೀಯ ಸ್ಥಾನಕ್ಕೆ ₹10 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ ₹5 ಸಾವಿರ ನಗದು ಬಹುಮಾನ ನೀಡಲಾಗುವುದು. ಇದರ ಜತೆಗೆ ಇಬ್ಬರು ಉತ್ತಮ ಗಾಯಕರಿಗೆ ತಲಾ ₹1,000 ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸಂಗೀತದಲ್ಲಿ ಆಸಕ್ತಿ ಹೊಂದಿರುವ ಪ್ರತಿಭಾವಂತ ಗಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಗಾಯನ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ರಾಜ್ಯದ ವಿವಿಧ ಭಾಗಗಳ ಗಾಯಕರಿಗೆ ವೇದಿಕೆ ಕಲ್ಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಸ್ಪರ್ಧೆಯ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9591864608 ಅಥವಾ 7019942303 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಚಾಮರಾಜ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜುಳಾ ಉಪಸ್ಥಿತರಿದ್ದರು.