ರಾಯಚೂರು, ನ. 1: ರಾಯಚೂರು ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ ಸಂಖ್ಯೆ 2ರ ಪಶ್ಚಿಮ ಭಾಗದಲ್ಲಿರುವ ಬಡಾವಣೆಗಳ ನಿವಾಸಿಗಳು ಹಾಗೂ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಪ್ಲಾಟ್ಫಾರಂ-2ರಲ್ಲಿ ಟಿಕೆಟ್ ಕೌಂಟರ್ ಅಥವಾ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸ್ನೇಹ ಸಂಗಮ ವಾಕಿಂಗ್ ಕ್ಲಬ್, ದೇವರು ಕಾಲೋನಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದರು.
ನವೆಂಬರ್ 1ರಂದು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ, ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ-2ರ ಪಶ್ಚಿಮ ಭಾಗದಲ್ಲಿರುವ ನಿಜಲಿಂಗಪ್ಪ ಕಾಲೋನಿ, ಮಹಾಲಕ್ಷ್ಮಿ ನಗರ, ದೇವರು ಕಾಲೋನಿ, ಶಿವಪುರ ಕಾಲೋನಿ, ಚುಕ್ಕಿ ಕಾಲೋನಿ, ರಾಂಪೂರ, ಹೊಸೂರು, ಶ್ರೀರಾಮನಗರ, ಮಾರುತಿ ಕಾಲೋನಿ, ಪ್ರಶಾಂತ ಕಾಲೋನಿ, ಸಾಯಿ ಕಾಲೋನಿ, ವೆಂಕಟಸಾಯಿ ಕಾಲೋನಿ, ಸಾಯಿ ರೋಹನ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ಸಾವಿರಾರು ನಿವಾಸಿಗಳು ರೈಲು ಪ್ರಯಾಣಕ್ಕಾಗಿ ಈ ಭಾಗದಿಂದ ನಿಲ್ದಾಣಕ್ಕೆ ಆಗಮಿಸುತ್ತಾರೆ.
ಆದರೆ, ಯಾದಗಿರಿ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಸುವವರು ಪ್ಲಾಟ್ಫಾರಂ-2ರ ಕಡೆಯಿಂದ ನಿಲ್ದಾಣದ ಪೂರ್ವ ಭಾಗದಲ್ಲಿರುವ ಮುಖ್ಯ ದ್ವಾರದ ಟಿಕೆಟ್ ಕೌಂಟರ್ಗೆ ತೆರಳಿ ಟಿಕೆಟ್ ಪಡೆದು, ಮತ್ತೆ ಅದೇ ಮಾರ್ಗವಾಗಿ ಪ್ಲಾಟ್ಫಾರಂ-2ಕ್ಕೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಂದರ್ಭದಲ್ಲಿ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕಾಗಿದ್ದು, ಲಿಫ್ಟ್ ಸೌಲಭ್ಯವೂ ಇಲ್ಲದಿರುವುದರಿಂದ ವಯೋವೃದ್ಧರು, ಮಹಿಳೆಯರು, ಮೊಣಕಾಲು ನೋವಿನಿಂದ ಬಳಲುತ್ತಿರುವವರು, ಅಸ್ತಮಾ ರೋಗಿಗಳು ಹಾಗೂ ಅಂಗವಿಕಲ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಇದಲ್ಲದೆ, ಪ್ರಸ್ತುತ ರೈಲ್ವೆ ನಿಲ್ದಾಣದಲ್ಲಿ ಅಭಿವೃದ್ಧಿ ಹಾಗೂ ದುರಸ್ತಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಮುಖ್ಯ ದ್ವಾರದ ಟಿಕೆಟ್ ಕೌಂಟರ್ ಸುಮಾರು 200 ಮೀಟರ್ ದೂರದಲ್ಲಿದೆ. ಪ್ಲಾಟ್ಫಾರಂ-2ರ ಕಡೆಯಿಂದ ಬರುವ ಪ್ರಯಾಣಿಕರು ಮೆಟ್ಟಿಲುಗಳನ್ನು ಹತ್ತಿ ಇಳಿದು, ದೂರ ನಡೆದು ಟಿಕೆಟ್ ಪಡೆದು, ಪುನಃ ಅದೇ ಮಾರ್ಗವಾಗಿ ಹಿಂತಿರುಗಿ ರೈಲು ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಅನಗತ್ಯ ದೈಹಿಕ ಶ್ರಮವೂ ಉಂಟಾಗುತ್ತಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಪ್ರಯಾಣಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ಲಾಟ್ಫಾರಂ-2ರಲ್ಲಿ ತಾತ್ಕಾಲಿಕ ಟಿಕೆಟ್ ಕೌಂಟರ್ ತೆರೆಯಬೇಕು ಅಥವಾ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ ಅಳವಡಿಸಬೇಕು. ಅಲ್ಲದೆ, ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶಾಶ್ವತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.
ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಪ್ರಯಾಣಿಕರ ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಬೇಕು. ವಿಶೇಷವಾಗಿ ವೃದ್ಧರು, ಮಹಿಳೆಯರು, ಅಂಗವಿಕಲರು ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಪ್ರಯಾಣಿಕರ ಹಿತದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮಲಿಂಗಪ್ಪ ಚಂದನಕೇರಿ, ಬಸವರಾಜ ಎಂ. ದೊರೆ, ಶಿವಕುಮಾರ ಎಇಇ, ಸಿದ್ದಪ್ಪ ಜೇಗರ್, ನರಸಪ್ಪ ಬಾಡಿಯಾಲ, ರಾಜೇಂದ್ರಪ್ಪ ಗುರಮಿಠಕಲ್, ಅಯ್ಯನಗೌಡ ನಂದಿಹಳ್ಳಿ, ಚಂದ್ರಶೇಖರ ಗುಡೆಬಲ್ಲೂರು ಸೇರಿದಂತೆ ಸ್ನೇಹ ಸಂಗಮ ವಾಕಿಂಗ್ ಕ್ಲಬ್ನ ಸದಸ್ಯರು ಹಾಗೂ ವಿವಿಧ ಬಡಾವಣೆಗಳ ನಿವಾಸಿಗಳು ಉಪಸ್ಥಿತರಿದ್ದರು.



