ಕಲಬುರಗಿ, ಅ.27: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರನ್ನು 3,297 ಮತಗಳ ಅಂತರದಿಂದ ಹಿಂದಿಕ್ಕಿರುವ ನಮೋಶಿ, ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿಯೇ ಗೆಲುವಿಗೆ ಅಗತ್ಯವಿದ್ದ ನಿಗದಿತ ಮತಗಳ ಕೋಟಾವನ್ನು ದಾಟುವ ಮೂಲಕ ವಿಜಯದ ನಗೆ ಬೀರಿದ್ದಾರೆ.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ನಮೋಶಿ, ಒಟ್ಟು 15,596 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ 12,299 ಮತಗಳನ್ನು ಪಡೆದರು.

ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಶಿಕ್ಷಕ ಮತದಾರರು ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದರು.

ಕ್ಷೇತ್ರದಲ್ಲಿ ಒಟ್ಟು 34,784 ಮತದಾರರಿದ್ದು, ಈ ಪೈಕಿ 30,253 ಮತಗಳು ಚಲಾವಣೆಯಾಗಿದ್ದವು. ಮತ ಎಣಿಕೆ ವೇಳೆ 28,380 ಮತಗಳು ಸಿಂಧುವಾಗಿದ್ದು, 1,873 ಮತಗಳು ತಿರಸ್ಕೃತಗೊಂಡಿವೆ.

ಚುನಾವಣಾ ಆಯೋಗದ ನಿಯಮಾನುಸಾರ ಒಟ್ಟು ಸಿಂಧು ಮತಗಳ ಆಧಾರದಲ್ಲಿ ಗೆಲುವಿಗೆ 14,191 ಮತಗಳ ಕೋಟಾ ನಿಗದಿಪಡಿಸಲಾಗಿತ್ತು. ಆದರೆ ಶಶೀಲ್ ಜಿ. ನಮೋಶಿ ಅವರು ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿಯೇ 15,596 ಮತಗಳನ್ನು ಗಳಿಸಿ ನಿಗದಿತ ಕೋಟಾಕ್ಕಿಂತ 1,405 ಮತಗಳನ್ನು ಹೆಚ್ಚುವರಿಯಾಗಿ ಪಡೆದರು.

ಮೂರು ಸುತ್ತುಗಳಲ್ಲಿ ನಡೆದ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯ ಪ್ರತಿಯೊಂದು ಸುತ್ತಿನಲ್ಲಿಯೂ ನಮೋಶಿ ಮುನ್ನಡೆ ಕಾಯ್ದುಕೊಂಡಿದ್ದರು. ಅಂತಿಮವಾಗಿ ಗೆಲುವಿಗೆ ಅಗತ್ಯವಿರುವ ಮತಗಳ ಕೋಟಾವನ್ನು ದಾಟಿದ ಹಿನ್ನೆಲೆಯಲ್ಲಿ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯ ಅಗತ್ಯವಿಲ್ಲದೆ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

ಚುನಾವಣಾಧಿಕಾರಿ ಜಹೀರಾ ನಸೀಮ್ ಅವರು ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿ, ವಿಜೇತ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರಿಗೆ ಚುನಾವಣಾ ಪ್ರಮಾಣಪತ್ರ ವಿತರಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಉಳಿದ ಅಭ್ಯರ್ಥಿಗಳು ಅತ್ಯಲ್ಪ ಮತಗಳನ್ನು ಪಡೆದರು.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣ ಜಮಾದಾರ 40 ಮತಗಳು ಹಾಗೂ ಜನತಾ ದಳ (ಸಂಯುಕ್ತ) ಪಕ್ಷದ ಅಭ್ಯರ್ಥಿ ಶಂಕರೆಡ್ಡಿ ಪಾಟೀಲ 44 ಮತಗಳನ್ನು ಪಡೆದರು.

ಪಕ್ಷೇತರ ಅಭ್ಯರ್ಥಿಗಳ ಪೈಕಿ ರಾಜಕುಮಾರ ಕೆ. ಕಲಬುರಗಿ 167 ಮತಗಳು, ರಾಜು ದೇವಪ್ಪ ಸೊನ್ನ 127 ಮತಗಳು, ಕವಿರಾಜ ನಾಗಣ್ಣ ಮೋತಕಪಲ್ಲಿ 49 ಮತಗಳು, ಶರಣು ಪಿ. ಸುಗೂರು 13 ಮತಗಳು, ಡಾ. ಸುರೇಶ ದಾವೀದಪ್ಪ 13 ಮತಗಳು, ಶಿವಶಂಕರ ಅಣ್ಣಪ್ಪ ತರನಳ್ಳಿ 12 ಮತಗಳು, ಮಹಬೂಬ್ ಮೊಹಮ್ಮದ ಖಾಜಾ ಹುಸೇನ್ ವಂಟೇಲಿ 10 ಮತಗಳು, ಟಿ.ಕೆ. ದಾಸರ 6 ಮತಗಳು ಹಾಗೂ ಶಶಿಧರ ಬಸವರಾಜ 4 ಮತಗಳನ್ನು ಪಡೆದಿದ್ದಾರೆ.

ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಅವರ ಸಮ್ಮುಖದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಗದಿತ ನಿಯಮಗಳ ಪ್ರಕಾರ ಮತಪತ್ರಗಳ ಪರಿಶೀಲನೆ ಮತ್ತು ಎಣಿಕೆ ಕಾರ್ಯ ನಡೆಸಿದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚುನಾವಣಾ ಪ್ರಕ್ರಿಯೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಹಕರಿಸಿದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಮತಗಟ್ಟೆ ಸಿಬ್ಬಂದಿ, ಮತ ಎಣಿಕೆ ಸಿಬ್ಬಂದಿ, ಪೊಲೀಸ್ ಇಲಾಖೆ, ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಹಾಗೂ ಶಿಕ್ಷಕ ಮತದಾರರಿಗೆ ಚುನಾವಣಾಧಿಕಾರಿ ಜಹೀರಾ ನಸೀಮ್ ಕೃತಜ್ಞತೆ ಸಲ್ಲಿಸಿದರು.

ಮತ ಎಣಿಕೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್., ಬಳ್ಳಾರಿ ಜಿಲ್ಲಾಧಿಕಾರಿ ಡಾ. ಕೆ. ನಾಗೇಂದ್ರ ಪ್ರಸಾದ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಸೇರಿದಂತೆ ವಿವಿಧ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿರುವ ಶಶೀಲ್ ಜಿ. ನಮೋಶಿ ಅವರು ವಿಧಾನ ಪರಿಷತ್ತಿನಲ್ಲಿ ತಮ್ಮ ಪ್ರಾತಿನಿಧ್ಯವನ್ನು ಮುಂದುವರಿಸಲಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರು ವಿವಿಧೆಡೆ ಸಂಭ್ರಮಾಚರಣೆ ನಡೆಸಿದರು.