ರಾಯಚೂರು: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹರನಹಳ್ಳಿ ಗ್ರಾಮದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟ ರೈತ ಪ್ರಭಣ್ಣ ಅವರ ಕುಟುಂಬಕ್ಕೆ ಶಾಸಕ ಬಸನಗೌಡ ದದ್ದಲ್ ಸರ್ಕಾರದ ವತಿಯಿಂದ ₹5 ಲಕ್ಷ ಪರಿಹಾರ ವಿತರಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಇತ್ತೀಚೆಗೆ ಹರನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ ಪ್ರಭಣ್ಣ ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತಿತರ ನಾಲ್ವರು ಗಾಯಗೊಂಡಿದ್ದರು. ಈ ದುರ್ಘಟನೆಯಿಂದ ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ದದ್ದಲ್ ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.

ಅಕಾಲಿಕವಾಗಿ ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡಿರುವ ಸದಸ್ಯರಿಗೆ ಧೈರ್ಯ ತುಂಬಿದ ಶಾಸಕರು, ಸರ್ಕಾರದ ವತಿಯಿಂದ ಮಂಜೂರಾದ ₹5 ಲಕ್ಷ ಪರಿಹಾರ ಧನವನ್ನು ಹಸ್ತಾಂತರಿಸಿದರು. ಇದೇ ವೇಳೆ ಘಟನೆಯ ಕುರಿತು ಕುಟುಂಬದವರಿಂದ ಮಾಹಿತಿ ಪಡೆದು, ಸಿಡಿಲು ಬಡಿತದಿಂದ ಗಾಯಗೊಂಡಿರುವ ನಾಲ್ವರ ಆರೋಗ್ಯದ ಬಗ್ಗೆಯೂ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸನಗೌಡ ದದ್ದಲ್, ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕುಟುಂಬಕ್ಕೆ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಸಾವು ತೀವ್ರ ಆಘಾತ ಉಂಟುಮಾಡಿದೆ. ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ನೋವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲ. ಆದರೂ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಸರ್ಕಾರ ಪರಿಹಾರ ನೀಡಿದೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪಗಳಿಂದ ತೊಂದರೆಗೆ ಒಳಗಾಗುವ ರೈತರು ಹಾಗೂ ಅವರ ಕುಟುಂಬಗಳ ನೆರವಿಗೆ ಸರ್ಕಾರ ಬದ್ಧವಾಗಿದೆ. ಸಂತ್ರಸ್ತ ಕುಟುಂಬಗಳು ಧೈರ್ಯ ಕಳೆದುಕೊಳ್ಳಬಾರದು. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಹಾಗೂ ಅವರ ಕುಟುಂಬಗಳಿಗೆ ಸೂಕ್ತ ಸಹಾಯ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಮೃತ ಪ್ರಭಣ್ಣ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಕುಟುಂಬದ ಸದಸ್ಯರಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ ಶಾಸಕರು, ಸಿಡಿಲು ಬಡಿತದಿಂದ ಗಾಯಗೊಂಡಿರುವ ನಾಲ್ವರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಭೀಮರಾವ್, ಗಿಲ್ಲೇಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಮಟಮಾರಿ, ಸೋಮಶೇಖರ್ ಪಾಟೀಲ್, ಮಲ್ಲಿಕಾರ್ಜುನ ಗೌಡ, ಜನಾರ್ದನ ಗೌಡ, ಸಂಗಮೇಶ ಭಂಡಾರಿ, ಷಣ್ಮುಖಪ್ಪ, ಮೌನೇಶ ನಾಯಕ, ಅಯ್ಯನಗೌಡ, ರಮೇಶ ರೊಸ್ಲಿ, ಕಂದಾಯ ನಿರೀಕ್ಷಕ ಹನುಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಉಪಸ್ಥಿತರಿದ್ದರು.