ರಾಯಚೂರು, ನ.6: ನಾಡಿನ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕಲಾ ಸಂಕುಲ ಸಂಸ್ಥೆಯ ವತಿಯಿಂದ ನವೆಂಬರ್ 8ರಂದು ಭಾನುವಾರ ನಗರದ ರಂಗಮಂದಿರದಲ್ಲಿ ‘ದೇಸಿ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಕಲಾವಿದರು ಒಂದೇ ವೇದಿಕೆಯಲ್ಲಿ ವೈವಿಧ್ಯಮಯ ಕಲಾ ಪ್ರದರ್ಶನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಹಿತಿ ವೀರ ಹನುಮಾನ ಹಾಗೂ ಅಲೆಮಾರಿ ಸಮುದಾಯದ ಈರಣ್ಣ ರುದ್ರಾಕ್ಷಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ 10.30 ಗಂಟೆಯಿಂದ ರಾಯಚೂರು ರಂಗಮಂದಿರದಲ್ಲಿ ಸುಗಮ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಹೊನ್ನಾವರದ ಚಂಡೆ ಮೇಳ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಂದ ನೃತ್ಯ ಹಾಗೂ ಗಾಯನ ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ. ಕಲಾ ಸಂಕುಲ ಸಂಸ್ಥೆಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು, ಕಲಾತಂಡಗಳ ಪ್ರಾಯೋಜಕತ್ವದ ಮೂಲಕ ಸಹಕಾರ ನೀಡಲಿದೆ ಎಂದು ವಿವರಿಸಿದ್ದಾರೆ.
ದೇಸಿ ಸಂಭ್ರಮ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 21 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪುರಸ್ಕಾರವನ್ನು ಚಿತ್ರನಟಿ ಹಾಗೂ ಸಮಾಜ ಸೇವಕಿ ಡಾ. ಪೂಜಾ ರಮೇಶ್ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಶಾಂತಪ್ಪ, ರಾಷ್ಟ್ರೀಯ ಕಾಂಗ್ರೆಸ್ ಮಹಿಳಾ ಸಮಿತಿಯ ಕಾರ್ಯದರ್ಶಿ ಶ್ರೀದೇವಿ ಆರ್.ವಿ. ನಾಯಕ್, ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಅನಿತಾ ಹಿರೇಮನಿ, ಕೆಪಿಸಿಸಿ ಕಾರ್ಯದರ್ಶಿ ಕೆ. ಅಸ್ಲಾಂ ಪಾಷಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೆರೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್. ಶಿವಶಂಕರ, ಸಮಾಜ ಸೇವಕರಾದ ಡಿ. ಶ್ರೀನಿವಾಸ್ ಹಾಗೂ ವಿರೂಪಾಕ್ಷಿ ಕೊರವಿಹಾಳ ಭಾಗವಹಿಸಲಿದ್ದಾರೆ.
ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ಕೆ. ಹನುಮಂತಪ್ಪ ಯಾದವ್ ಸೇರಿದಂತೆ ಒಟ್ಟು 21 ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಡಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಆಯೋಜಕ ಮಾರುತಿ ಬಡಿಗೇರ್ ಮನವಿ ಮಾಡಿದ್ದಾರೆ.



