ಯಾದಗಿರಿ, ಅ.4: EPS-95 ಭವಿಷ್ಯನಿಧಿ ನಿವೃತ್ತ ಪಿಂಚಣಿದಾರರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ಭರವಸೆಗಳ ಅನುಷ್ಠಾನ ಮತ್ತಷ್ಟು ವಿಳಂಬವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು EPS-95 ಪಿಂಚಣಿದಾರರ ಮುಖಂಡರು ಎಚ್ಚರಿಸಿದರು.

ನಗರದ ಶ್ರೀ ತಾಯಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ EPS-95 NAC ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಪಿಂಚಣಿದಾರರ ದೀರ್ಘಕಾಲದ ಬೇಡಿಕೆಗಳು ಹಾಗೂ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು.

ಸಮಾವೇಶದಲ್ಲಿ ರಾಯಚೂರು ವಿಭಾಗದಿಂದ ಸುಮಾರು 45ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 350ಕ್ಕೂ ಹೆಚ್ಚು EPS-95 ನಿವೃತ್ತ ಪಿಂಚಣಿದಾರರು ಭಾಗವಹಿಸಿದ್ದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, EPS-95 ನಿವೃತ್ತ ಪಿಂಚಣಿದಾರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಂಚಣಿದಾರರ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಕೇಂದ್ರ ಸರ್ಕಾರ ನೀಡಿರುವ ಭರವಸೆಗಳು ಶೀಘ್ರ ಅನುಷ್ಠಾನಗೊಳ್ಳಬೇಕು. ನಿವೃತ್ತಿಯ ನಂತರ ಜೀವನ ನಿರ್ವಹಣೆಗೆ ಪಿಂಚಣಿಯನ್ನೇ ಅವಲಂಬಿಸಿರುವ ಹಿರಿಯ ನಾಗರಿಕರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಭರವಸೆಗಳ ಅನುಷ್ಠಾನದಲ್ಲಿ ಮತ್ತಷ್ಟು ವಿಳಂಬವಾದರೆ ಸಂಘಟಿತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಅಖಿಲ ಭಾರತ ಪ್ರಧಾನ ಸಂಯೋಜಕ ರಾಮಕಾಂತ್ ನರಗುಂದ, ಪ್ರಾಂತ ಖಜಾಂಚಿ ಕುಲಕರ್ಣಿ, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದನಗೌಡ, ಉಪಾಧ್ಯಕ್ಷ ನಾಗಿರೆಡ್ಡಿ, ಹಿರಿಯ ಪದಾಧಿಕಾರಿಗಳಾದ ಹೊನ್ನಪ್ಪ, ಕೆ.ಟಿ. ಜಾಧವ, ರಾಯಚೂರು ವಿಭಾಗದ ಗೌರವಾಧ್ಯಕ್ಷ ಭೀಮಸೇನ್ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಸಂಘದ ಹಿರಿಯರಾದ ಹಂಪಯ್ಯ ಸ್ವಾಮಿ, ಬಾಳಪ್ಪ ಲಿಂಗಸುಗೂರು, ಖಜಾಂಚಿ ವೀರೇಶ್ ಬಾಬು, ಬಾಲಾಜಿ ರಾವ್, ವೈ. ಮಲ್ಲಿಕಾರ್ಜುನ, ಎನ್. ಬಸವರಾಜ್, ಹುಲಿಗಪ್ಪ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಯಾದಗಿರಿ ಜಿಲ್ಲಾ ಸಂಘಟನೆಯ ವತಿಯಿಂದ ಸಮಾವೇಶಕ್ಕೆ ಆಗಮಿಸಿದ ಸದಸ್ಯರಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅನಾರೋಗ್ಯದ ಕಾರಣ ಪ್ರಧಾನ ಕಾರ್ಯದರ್ಶಿ ಮಲ್ಲಾರೆಡ್ಡೆಪ್ಪ ಹಾಗೂ ಅನಿವಾರ್ಯ ಕಾರಣಗಳಿಂದ ವೀರಭದ್ರಪ್ಪ ಅಂಬರ್‌ಪೇಟೆ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಸಂಘಟಕರು ತಿಳಿಸಿದರು.