ಹಟ್ಟಿ ಚಿನ್ನದ ಗಣಿ: ಸಮೀಪದ ಹಿರೇನಗನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಮಾಧ್ಯಮದ ಒಂದನೇ ತರಗತಿಗೆ ಹೊಸದಾಗಿ ದಾಖಲಾದ 22 ಮಕ್ಕಳಿಗೆ ಉಚಿತವಾಗಿ ಬ್ಯಾಗ್‌, ನೋಟ್‌ಬುಕ್‌ ಹಾಗೂ ಪೆನ್ಸಿಲ್ ಒಳಗೊಂಡ ಕಲಿಕಾ ಕಿಟ್‌ಗಳನ್ನು ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕ ಮೌನುದ್ದೀನ್ ಬೂದಿನಾಳ ವಿತರಿಸಿದರು.

ಇದೇ ವೇಳೆ ಚುಕ್ಕನಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೂ ಕಲಿಕಾ ಕಿಟ್‌ಗಳ ಜೊತೆಗೆ ತಲಾ ₹1,000 ಪ್ರೋತ್ಸಾಹ ಧನ ನೀಡಲಾಯಿತು.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣದ ಆರಂಭದಲ್ಲೇ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊಸ ಬ್ಯಾಗ್‌ಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಪಡೆದ ಮಕ್ಕಳಲ್ಲಿ ಸಂತಸ ಕಂಡುಬಂತು.

ಈ ಸಂದರ್ಭದಲ್ಲಿ ಮಾತನಾಡಿದ ಮೌನುದ್ದೀನ್ ಬೂದಿನಾಳ, ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಅವರು ಉತ್ಸಾಹದಿಂದ ಶಾಲೆಗೆ ಬರುತ್ತಾರೆ. ಮಕ್ಕಳ ಶಿಕ್ಷಣಕ್ಕೆ ತಮ್ಮಿಂದಾದ ಸಹಾಯವನ್ನು ಮುಂದೆಯೂ ನಿರಂತರವಾಗಿ ನೀಡುವುದಾಗಿ ಹೇಳಿದರು.

ಶಾಲೆಯ ಪ್ರಭಾರಿ ಮುಖ್ಯಗುರು ಮಮತಾ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಮೇಲಿನ ಕಾಳಜಿಯಿಂದ ಪ್ರತಿ ವರ್ಷವೂ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿರುವ ದಾನಿಗಳ ಕಾರ್ಯ ಶ್ಲಾಘನೀಯ. ಇಂತಹ ಸಹಕಾರ ಸರ್ಕಾರಿ ಶಾಲೆಗಳ ಬಲವರ್ಧನೆಗೆ ನೆರವಾಗುತ್ತದೆ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸವರಾಜಪ್ಪ ಕುರುಗೋಡ್, ಮಹಿಬೂಬ್ ಸಾಬ್ ಶರಣರು, ನಿಂಗಪ್ಪ ಹುಬ್ಬಳ್ಳಿ, ಅಬ್ರಹಾಂ ಸಲಬೂರು, ಆನಂದ್ ಕಂದಳ್ಳಿ, ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷೆ ಗೌರಮ್ಮ ಬಸವರಾಜ್, ಪದಾಧಿಕಾರಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.