ಲಿಂಗಸುಗೂರು: ತಾಲೂಕಿನ ಸಂತೆ ಮಾರುಕಟ್ಟೆಗಳಲ್ಲಿ ರೈತರಿಂದ ನಿಯಮಬಾಹಿರವಾಗಿ ಹೆಚ್ಚಿನ ಕರವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಅದನ್ನು ತಕ್ಷಣವೇ ತಡೆಯಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ ರೆಡ್ಡಿ ನೇತೃತ್ವದಲ್ಲಿ ಸಹಾಯಕ ಆಯುಕ್ತ ನಾಗೇಂದ್ರ ಬಾಬು ಅವರಿಗೆ ಮನವಿ ಸಲ್ಲಿಸಲಾಯಿತು.

ರೈತರಿಗೆ ಬರ ಪರಿಹಾರ ನೀಡಬೇಕು, ರೈತರ ಜಮೀನುಗಳಿಗೆ ನೀರು ಪೂರೈಸುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ 10 ದಿನ ನೀರು ನಿಲ್ಲಿಸುವ ಬದಲು 7 ದಿನ ನೀರು ನಿಲ್ಲಿಸಿ ನಿರಂತರ 14 ದಿನಗಳ ಕಾಲ ಜಮೀನುಗಳಿಗೆ ನೀರು ಒದಗಿಸಬೇಕು. ಜೊತೆಗೆ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 9 ಗಂಟೆಗಳ ವಿದ್ಯುತ್ ಸರಬರಾಜು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಕಾಲುವೆಗಳ ಡಿಸ್ಟ್ರಿಬ್ಯೂಟರ್ ಸಿಡಿಗಳು ಹಾಳಾಗಿರುವುದರಿಂದ ರೈತರು ಹೊಲ ಮತ್ತು ಗದ್ದೆಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ದುರಸ್ತಿ ಕಾಮಗಾರಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಆದ್ದರಿಂದ ಬಾಕಿ ಉಳಿದ ದುರಸ್ತಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ತಾಲೂಕಿನಾದ್ಯಂತ ನಡೆಯುವ ಸಂತೆ ಮಾರುಕಟ್ಟೆಗಳಲ್ಲಿ ರೈತರು ತರುವ ತರಕಾರಿ ಹಾಗೂ ಇತರೆ ಕೃಷಿ ಉತ್ಪನ್ನಗಳಿಗೆ ನಿಯಮಬಾಹಿರವಾಗಿ ಹೆಚ್ಚಿನ ಕರ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಈ ವಸೂಲಿಯನ್ನು ನಿಲ್ಲಿಸಿ, ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಲಿಂಗಸುಗೂರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮತ್ತು ಹರಾಜು ಪ್ರಕ್ರಿಯೆ ತಡರಾತ್ರಿ ಆರಂಭವಾಗುತ್ತಿದ್ದು, ಇದರಿಂದ ರೈತರು ಹಾಗೂ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಈ ಪದ್ಧತಿಯನ್ನು ನಿಲ್ಲಿಸಿ, ಹರಾಜು ಪ್ರಕ್ರಿಯೆಯನ್ನು ಬೆಳಿಗ್ಗೆ 6 ಗಂಟೆಗೆ ನಡೆಸುವಂತೆ ವ್ಯವಸ್ಥೆ ಮಾಡಬೇಕು. ಜೊತೆಗೆ ತರಕಾರಿ ಮಾರಾಟ ಹಾಗೂ ಹರಾಜು ಪ್ರಕ್ರಿಯೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕರಿಯಪ್ಪ, ಮಹ್ಮದ್ ಸಾಬ್, ಬಸವರಾಜ ಅಂಗಡಿ, ಅಮರಯ್ಯ ಗುಡದನಾಳ, ಹುಲಗಪ್ಪ ನಾಯಕ, ಹನುಮಂತ ಹಳ್ಳಿ, ದುರಗಪ್ಪ ಗೌಡೂರ, ರಂಗಪ್ಪ ಭೀಮಪ್ಪ, ವೀರಭದ್ರ, ಸಿದ್ದು, ಬಸವರಾಜ ನಾಯಕ, ಇಮಾಮ್ ಸಾಬ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.