ಲಿಂಗಸುಗೂರು: ತಾಲೂಕಿನ ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದನಾಳ ಗ್ರಾಮದ ಎಸ್‌ಸಿ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಿ, ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಎಸ್‌ಸಿ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಕೊಳಚೆ ನೀರು ಸರಾಗವಾಗಿ ಹರಿಯದೆ ಮನೆಗಳ ಮುಂಭಾಗ ಹಾಗೂ ರಸ್ತೆಯ ಮೇಲೆ ನಿಲ್ಲುತ್ತಿದೆ. ಇದರಿಂದ ದುರ್ವಾಸನೆ ಹರಡುವುದರ ಜೊತೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಚರಂಡಿ ನೀರು ರಸ್ತೆಯ ಮೇಲೆಯೇ ನಿಲ್ಲುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು ಹಾಗೂ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಬೇಕು. ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಸಿ ವಾರ್ಡ್‌ನ ಮಹಿಳೆಯರಾದ ಶರಣಮ್ಮ, ದುರ್ಗಮ್ಮ, ಹುಲಗೆಮ್ಮ, ಬಸಮ್ಮ, ರಾಧಾ, ಗುಂಡಪ್ಪ ಗ್ರಾಕೂಸ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.