ಶಹಾಪುರ: ಪಟ್ಟಣದ ಪಿ.ಎಂ. ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಇತ್ತೀಚೆಗೆ ( 19 ಮತ್ತು 20 ರಂದು) ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಶಾಲೆಯ ತಂಡವು ಅದ್ಭುತ ಆಟ ಪ್ರದರ್ಶಿಸಿ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 24 ಪ್ರಮುಖ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಈ ಕ್ರೀಡಾಕೂಟದಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಶಾಲೆಯ ವಿದ್ಯಾರ್ಥಿ ಮೈನುದ್ದೀನ್ ಖಾಜಾಪಟೇಲ್ ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ಮುಂಬರುವ ಆ 03 ರಿಂದ ಆ 07 ರವರೆಗೆ ಛತ್ತೀಸ್ಗಢದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಈತ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾನೆ.
ಈ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗೆ ವಿದ್ಯಾಲಯದ ಮುಖ್ಯಗುರುಗಳು,ಕ್ರೀಡಾ ತರಬೇತುದಾರರು ಹಾಗೂ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ತೀವ್ರ ಹರ್ಷ ವ್ಯಕ್ತಪಡಿಸಿ,ಶುಭ ಹಾರೈಸಿದ್ದಾರೆ.

