ಲಿಂಗಸುಗೂರು: ಪಟ್ಟಣದ ಎಸ್.ಬಿ.ಎಚ್. ಕಾಲೋನಿಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಪ್ರತಿಷ್ಠಾಪನೆಯಾಗಿ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ದೇವಸ್ಥಾನ ಸಮಿತಿ ನಿರ್ಧರಿಸಿದೆ.

ದೇವಸ್ಥಾನ ಸಮಿತಿ ಅಧ್ಯಕ್ಷ ಮೋಹನ ಜೋಶಿ ಮಾತನಾಡಿ, ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪಂಡಿತರಿಂದ ಪ್ರವಚನಗಳು ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ರಜತ ಮಹೋತ್ಸವದ ಅಂಗವಾಗಿ ಉಡುಪಿಯ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥರು, ಬೆಂಗಳೂರಿನ ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥರು ಹಾಗೂ ಹುಣಸಿಹೊಳೆ ಕಣ್ವಮಠದ ಶ್ರೀ ಶ್ರೀ ವಿದ್ಯಾಕಣ್ವವಿರಾಜತೀರ್ಥರು ಆಗಮಿಸಲಿದ್ದಾರೆ. ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.

ರಜತ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಹಿರಿಯ ಧರ್ಮದರ್ಶಿ ಪ್ರಾಣೇಶಾಚಾರ್ಯ ಪುರಾಣಿಕ ವಂದಲಿ, ಜಗನ್ನಾಥ ಕುಲಕರ್ಣಿ, ಪ್ರಮೋದ ಕುಲಕರ್ಣಿ, ರಾಜಗೋಪಾಲ, ರಾಘವೇಂದ್ರ ಆಚಾರ, ಬಿ.ಟಿ. ನಾಯಕ, ಯಲಗೂರೇಶ, ವಸಂತರಾವ್, ವೆಂಕಟರಾವ್ ತೊರಲಬೆಂಚಿ, ಮಹೇಶ, ರಾಘವೇಂದ್ರ ಗುಮಾಸ್ತೆ, ಕೃಷ್ಣಾ ಸೇರಿದಂತೆ ಇತರರು ಉಪಸ್ಥಿತರಿದ್ದರು.