ಲಿಂಗಸುಗೂರು: ಹೂಗಾರ ಸಮಾಜವು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದ್ದು, ಹೂ ವ್ಯಾಪಾರ, ಪೂಜಾರಿಕೆ ಸೇರಿದಂತೆ ಸಾಂಪ್ರದಾಯಿಕ ಕಾಯಕಗಳನ್ನು ಅವಲಂಬಿಸಿರುವ ಅನೇಕ ಕುಟುಂಬಗಳು ಇಂದಿಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಸರ್ಕಾರ ಹೂಗಾರ ಸಮಾಜದ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಹೂಗಾರ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಪ್ಪ ಹೂಗಾರ ಒತ್ತಾಯಿಸಿದರು.
ಪಟ್ಟಣದ ಹೂಗಾರ ಭವನದಲ್ಲಿ ಶ್ರೀ ಹೂಗಾರ ಮಾದಯ್ಯನವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಹಾಗೂ ಶ್ರೀ ಹೂಗಾರ ಮಾದಯ್ಯನವರ ವೃತ್ತಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಸಮಾಜದ ಯುವಕರು ಹಾಗೂ ಕಾಯಕನಿಷ್ಠೆಯಿಂದ ಬದುಕುತ್ತಿರುವ ಕುಟುಂಬಗಳಿಗೆ ಆರ್ಥಿಕ ನೆರವು, ಸಾಲ ಸೌಲಭ್ಯ, ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು. ರಾಜ್ಯದಲ್ಲಿ ಹೂಗಾರ ಸಮಾಜದ ಜನಸಂಖ್ಯೆ ಸುಮಾರು 5ರಿಂದ 6 ಲಕ್ಷದಷ್ಟಿದ್ದು, ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಪೂಜಾರಿಕೆ ವೃತ್ತಿಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅರ್ಹ ಕುಟುಂಬಗಳಿಗೆ ಇನಾಮು ಭೂಮಿಯನ್ನು ಮರಳಿ ನೀಡುವ ಸಂಬಂಧ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾಜದ ಗೌರವಾಧ್ಯಕ್ಷ ಮಂಜುನಾಥ ಹೂಗಾರ ಮಾತನಾಡಿ, ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ದೇಶಕ್ಕೆ ಮಾದರಿಯಾಗಿದೆ. ಅಲ್ಲಮಪ್ರಭು ಹಾಗೂ ಹೂಗಾರ ಮಾದಯ್ಯ ಅವರು ಕಾಯಕ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಮಹನೀಯರು. ಇಂತಹ ಮಹಾನ್ ವ್ಯಕ್ತಿಗಳ ಪರಂಪರೆಯಲ್ಲಿ ನಾವು ಜನಿಸಿರುವುದು ಹೆಮ್ಮೆಯ ಸಂಗತಿ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಶಿವಮಹಾಂತೇಶ್ ಹೂಗಾರ, ವೆಂಕಟೇಶ್ ಹೂಗಾರ, ಬಸವರಾಜ ಹೂಗಾರ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಹೂಗಾರ, ಶರಣಬಸವ, ಹನುಮೇಶ್, ಮಹಾತೇಶ್, ವಿರೂಪಾಕ್ಷಿ, ಶಂಕರಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.



