ಲಿಂಗಸಗೂರು: ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ಏಳು ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಮಸ್ಯೆ ಪರಿಹರಿಸಿ ಹಿಂದಿನಂತೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಒತ್ತಾಯಿಸಿದೆ.
ಸಂಘಟನೆಯ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ ನೇತೃತ್ವದಲ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ, ಪೈದೊಡ್ಡಿ ಭಾಗದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಈ ಹಿಂದೆ ಸಂಜೆ 6 ಗಂಟೆ ವೇಳೆಗೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಆದರೆ ಇತ್ತೀಚೆಗೆ ರಾತ್ರಿ 8 ಗಂಟೆಯ ನಂತರ ವಿದ್ಯುತ್ ಬರುತ್ತಿರುವುದರಿಂದ ಗ್ರಾಮೀಣ ಜನಜೀವನಕ್ಕೆ ತೊಂದರೆಯಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪ್ರಸ್ತುತ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವುದರಿಂದ ಸಂಜೆ ವೇಳೆ ವಿದ್ಯುತ್ ಇಲ್ಲದೆ ಓದು ಮತ್ತು ಪರೀಕ್ಷಾ ಸಿದ್ಧತೆಗೆ ಅಡ್ಡಿಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪೈದೊಡ್ಡಿ ಭಾಗವು ಗುಡ್ಡಗಾಡು ಪ್ರದೇಶವಾಗಿದ್ದು, ರಾತ್ರಿ ವೇಳೆ ವಿಷಜಂತುಗಳ ಭಯವೂ ಇದೆ. ವಿದ್ಯುತ್ ಇಲ್ಲದಿರುವುದರಿಂದ ಗ್ರಾಮಸ್ಥರು ಕತ್ತಲಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದಲೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ವಿದ್ಯುತ್ ಪೂರೈಕೆ ಸಮಸ್ಯೆ ಕುರಿತು ಸಂಬಂಧಿಸಿದ ಸೆಕ್ಷನ್ ಅಧಿಕಾರಿಗಳನ್ನು ವಿಚಾರಿಸಿದಾಗ ಮೇಲಾಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದರಿಂದ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು.
ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದೆ ಸಮಸ್ಯೆ ಮುಂದುವರಿದಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರೊಂದಿಗೆ ಜೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ಪ್ರಭುಗೌಡ ಪಾಟೀಲ, ಮುದಕಪ್ಪ ಗುರಿಕಾರ, ಅಜೀಜ್ ಪಾಷಾ, ಗೋಪಾಲಪ್ಪ, ಹನುಮಪ್ಪ ಸುರಪುರ, ಭೀಮಣ್ಣ ಕಂಬಾರ, ಚಂದ್ರು ಪೈದೊಡ್ಡಿ, ಬಸಪ್ಪ, ರಮಗಪ್ಪ, ಮುತ್ತಣ್ಣ, ಅಮರೇಶ ಭೂಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.



