ಲಿಂಗಸುಗೂರು: ಆರೋಗ್ಯ ಇಲಾಖೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆಯೇ ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಪ್ರೀತಿಪಾತ್ರರ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಎಆರ್‌ಟಿ ವಿಭಾಗದ ವೈದ್ಯಾಧಿಕಾರಿ ಡಾ. ರುದ್ರಮುನಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎನ್‌ಸಿಡಿ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದರು.

ಹೃದಯ ಸಂಬಂಧಿ ಸಮಸ್ಯೆಗಳು ಕೆಲವೊಮ್ಮೆ ಸ್ಪಷ್ಟ ಲಕ್ಷಣಗಳಿಲ್ಲದೆ ಬೆಳೆಯಬಹುದು. ಹೃದಯ ಬಡಿತದಲ್ಲಿನ ಅಸಹಜತೆ ಸೇರಿದಂತೆ ದೇಹ ನೀಡುವ ಎಚ್ಚರಿಕೆಯ ಸಂಕೇತಗಳನ್ನು ನಿರ್ಲಕ್ಷಿಸಬಾರದು. ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಧೂಮಪಾನ, ತಂಬಾಕು ಹಾಗೂ ನಶ್ಯ ಸೇವನೆಯಿಂದ ದೂರವಿರಬೇಕು. ಮದ್ಯಪಾನ ತ್ಯಜಿಸುವುದರ ಜೊತೆಗೆ ಸ್ವಚ್ಛತೆ, ಸಮತೋಲಿತ ಆಹಾರ, ದೈಹಿಕ ಚಟುವಟಿಕೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ದುಶ್ಚಟಗಳಿಂದ ಹೃದಯ ಸಂಬಂಧಿ ಸಮಸ್ಯೆಗಳಷ್ಟೇ ಅಲ್ಲದೆ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಯುವ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಆಹಾರ ಪದ್ಧತಿ ಮತ್ತು ದೈನಂದಿನ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್, ಡಾ. ಅಮೀನ್, ಡಾ. ನೀಲಕಂಠ, ಡಾ. ಪ್ರಗತಿ, ಎನ್‌ಸಿಡಿ ತಂಡದ ಚಂದ್ರಕಲಾ, ನೀಲಾಂಬಿಕೆ, ಶಾಂತಮ್ಮ, ಅಮರೇಶ್, ರಾಜಶೇಖರ್, ಆಸ್ಪತ್ರೆಯ ಸಿಬ್ಬಂದಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.