ನವದೆಹಲಿ, ಅ.7: ರಾಯಚೂರು–ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕರ್ನಾಟಕದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿಗಳಿಗೆ ವೇಗ ನೀಡಬೇಕು ಹಾಗೂ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಬಾರದು ಎಂದು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಒತ್ತಾಯಿಸಿದರು.

ನವದೆಹಲಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮುಖ್ಯ ಕಚೇರಿಯಲ್ಲಿ ಎನ್‌ಎಚ್‌ಎಐ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಚೌಧರಿ ಹಾಗೂ ಕರ್ನಾಟಕದ ಹೆದ್ದಾರಿ ಕಾಮಗಾರಿಗಳ ಉಸ್ತುವಾರಿ ಪ್ರಧಾನ ವ್ಯವಸ್ಥಾಪಕ ಅಜಯ್ ಗುಪ್ತಾ ಅವರೊಂದಿಗೆ ಸಭೆ ನಡೆಸಿದ ಅವರು, ಕ್ಷೇತ್ರ ವ್ಯಾಪ್ತಿಯ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ, ಭೂಸ್ವಾಧೀನ, ರಸ್ತೆ ಸಂಪರ್ಕ ಹಾಗೂ ಕಾಮಗಾರಿಗಳ ಗುಣಮಟ್ಟಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು.

ರಾಯಚೂರು–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಪ್ಯಾಕೇಜ್–7ಕ್ಕೆ ಇತ್ತೀಚೆಗೆ ಅಂತಿಮಗೊಳಿಸಲಾದ ಮಾರ್ಗದ ಆಧಾರದ ಮೇಲೆ ನವೆಂಬರ್‌ನಿಂದ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು.

ಪ್ಯಾಕೇಜ್–5 ಮತ್ತು 6ಕ್ಕೆ ಸಂಬಂಧಿಸಿದ ಬಹುತೇಕ ಭೂಸ್ವಾಧೀನ ಸಮಸ್ಯೆಗಳನ್ನು ಜಿಲ್ಲಾಡಳಿತದ ಮಟ್ಟದಲ್ಲಿ ಪರಿಹರಿಸಲಾಗಿದೆ. ಹೀಗಾಗಿ ಕಾಮಗಾರಿ ಕೈಗೊಂಡಿರುವ ಸಂಸ್ಥೆಗಳು ಇನ್ನು ವಿಳಂಬ ಮಾಡದೆ ಕೆಲಸಕ್ಕೆ ವೇಗ ನೀಡಬೇಕು. ಇದೇ ವೇಳೆ ಕಾಮಗಾರಿಯ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ಸಂಸದರು ಸೂಚಿಸಿದರು.

ಆಂಧ್ರಪ್ರದೇಶ–ಕರ್ನಾಟಕ ಸಂಪರ್ಕಿಸುವ ಪ್ರಮುಖ ರಸ್ತೆ ಯೋಜನೆಯನ್ನೂ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಅವರು ಮನವಿ ಮಾಡಿದರು. ಭೂಸ್ವಾಧೀನ ಅಧಿಸೂಚನೆ ಹೊರಡಿಸಿ, ಭೂಮಿಯ ಸಮೀಕ್ಷೆಯೂ ಪೂರ್ಣಗೊಂಡಿರುವುದರಿಂದ ಯೋಜನೆಯನ್ನು ವಿಳಂಬ ಮಾಡದೆ ಮುಂದುವರಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗುವಂತೆ ಈ ರಸ್ತೆಯನ್ನು Access Controlled ಬದಲಿಗೆ Non-Access Controlled ರಸ್ತೆಯಾಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಮನವಿ ಮಾಡಿದರು. ಅಗತ್ಯ ಅನುಮೋದನೆ ಪಡೆಯುವ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಸೂರತ್–ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಪ್ಯಾಕೇಜ್–3 ಮತ್ತು 4ರ ಕಾಮಗಾರಿಗಳ ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ಮಾಹಿತಿ ನೀಡಿದರು.

NH-150Cನಲ್ಲಿ ಯಾದಗಿರಿ–ವಡಗೇರಾ ರಸ್ತೆಗೆ ವಡಗೇರಾ ಸಮೀಪ Entry/Exit Access ಕಲ್ಪಿಸಬೇಕೆಂಬ ಬೇಡಿಕೆಯನ್ನೂ ಸಂಸದರು ಪ್ರಸ್ತಾಪಿಸಿದರು. ತಾಂತ್ರಿಕ ಹಾಗೂ ಕಾರ್ಯಸಾಧ್ಯತೆಯ ಅಂಶಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕೋನಹಳ್ಳಿಯಲ್ಲಿರುವ ಅಂಡರ್‌ಪಾಸ್ ಅನ್ನು ರಾಜ್ಯ ಹೆದ್ದಾರಿ ಅಗಲೀಕರಣದ ನಂತರ Box Pushing ವಿಧಾನದಲ್ಲಿ ದ್ವಿಗುಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಹೋರಟೂರು ಗ್ರಾಮದಲ್ಲಿ ಸಣ್ಣ ವಾಹನಗಳ ಸುರಕ್ಷಿತ ಸಂಚಾರ ಹಾಗೂ ರಸ್ತೆ ದಾಟುವಿಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.

ರಾಯಚೂರು–ಬೆಳಗಾವಿ ಮತ್ತು ಸೂರತ್–ಚೆನ್ನೈ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಕಲ್ಯಾಣ ಕರ್ನಾಟಕದ ಸಂಪರ್ಕ ವ್ಯವಸ್ಥೆ ಸುಧಾರಣೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಮಹತ್ವದ್ದಾಗಿವೆ. ಹೀಗಾಗಿ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬಕ್ಕೆ ಅವಕಾಶ ನೀಡದೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ. ಕುಮಾರ ನಾಯಕ ಅಧಿಕಾರಿಗಳಿಗೆ ಒತ್ತಾಯಿಸಿದರು.