ಲಿಂಗಸುಗೂರು: ತಂಜಿಮುಲ್ ಮುಸ್ಲಿಮೀನ್ ಕಮಿಟಿಯ ನೋಂದಣಿ ರದ್ದುಪಡಿಸುವಂತೆ ಸಲ್ಲಿಸಿರುವ ದೂರಿನ ವಿಚಾರಣೆಗೆ ಲಿಂಗಸುಗೂರು ಹಿರಿಯ ನಿರೀಕ್ಷಕ ಗಂಗಪ್ಪ ಅವರನ್ನು ವಿಶೇಷ ಅಧಿಕಾರಿಯಾಗಿ ರಾಯಚೂರು ಸಹಕಾರ ಸಂಘಗಳ ಉಪನಿಬಂಧಕರು ನೇಮಕ ಮಾಡಿದ್ದಾರೆ.

ಅಂಜುಮನ್ ತಾಲೂಕು ಗೌರವಾಧ್ಯಕ್ಷ ಅನ್ಸರುದ್ದೀನ್ ಹಾಗೂ ಅಧ್ಯಕ್ಷ ಹುಸೇನ್ ಬಾಷಾ ಅವರು ಕಮಿಟಿಯ ನೋಂದಣಿ ರದ್ದುಗೊಳಿಸುವಂತೆ ದೂರು ಸಲ್ಲಿಸಿದ್ದರು. ಈ ಹಿಂದೆ ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಸಹಾಯಕ ನಿಬಂಧಕರಿಗೆ ನೀಡಲಾಗಿತ್ತು. ಆದರೆ, ಸಂಬಂಧಿಕರು ಪ್ರಕರಣದಲ್ಲಿ ಇರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ವಿಚಾರಣೆ ನಡೆಸಲು ತೊಂದರೆಯಾಗಬಹುದು ಎಂದು ಅವರು ಬೇರೆ ಅಧಿಕಾರಿಯನ್ನು ನೇಮಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಗಂಗಪ್ಪ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದ್ದು, ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಸಂಬಂಧಪಟ್ಟ ದಾಖಲೆಗಳು, ಬೈಲಾ ಹಾಗೂ ಇತರ ಅಂಶಗಳನ್ನು ಪರಿಶೀಲಿಸಿ ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ಕುರಿತು ಮಾತನಾಡಿದ ಅನ್ಸರುದ್ದೀನ್, ವಿಚಾರಣೆ ನಿಷ್ಪಕ್ಷಪಾತವಾಗಿ ನಡೆಯಬೇಕು. ನಿಯಮ ಉಲ್ಲಂಘನೆ ನಡೆದಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಮಿಟಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.