ಬಾಗಲಕೋಟೆ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ–2026ರಲ್ಲಿ ಯುವ ಕವಯತ್ರಿ ಕುಮಾರಿ ಜ್ಯೋತಿ ಆನಂದ ಚಂದುಕರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಪ್ರಕಾಶ್ ಗ. ಖಾಡೆ ಅವರ ‘ಲೋಕದ ಸುತ್ತಾಟ ಲಂಡನ್’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಇದರೊಂದಿಗೆ ಆಯೋಜಿಸಿದ್ದ ದಸರಾ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಯುವ ಕವಯತ್ರಿ ಜ್ಯೋತಿ ಆನಂದ ಚಂದುಕರ ಅವರು ‘ನಮ್ಮ ಬಾಗಲಕೋಟೆ’ ಎಂಬ ಕವನವನ್ನು ಭಾವಪೂರ್ಣವಾಗಿ ವಾಚಿಸುವ ಮೂಲಕ ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರರಾದರು. ಅವರ ಕಾವ್ಯ ಪ್ರತಿಭೆಯನ್ನು ಗುರುತಿಸಿದ ಗಣ್ಯರು ವಿಶೇಷ ಸನ್ಮಾನ ನೀಡಿ ಗೌರವಿಸಿದರು.

ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಜ್ಯೋತಿ ಅವರು ಜಿಲ್ಲಾಡಳಿತ ಹಾಗೂ ತಾಲೂಕು ಮಟ್ಟದಲ್ಲಿ ಆಯೋಜಿಸಲಾದ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪ್ರಶಸ್ತಿ, ಗೌರವಗಳನ್ನು ಪಡೆದುಕೊಂಡಿರುವ ಅವರು ಯುವ ಕವಯತ್ರಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಸನ್ಮಾನ ಸಂದರ್ಭದಲ್ಲಿ ಗಣ್ಯರು ಮಾತನಾಡಿ, ಯುವ ಪ್ರತಿಭೆಗಳು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜ್ಯೋತಿ ಚಂದುಕರ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಹಿತ್ಯ ರಚನೆಗಳ ಮೂಲಕ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಸಂಘಟನಾ ಕಾರ್ಯದರ್ಶಿ ಮುತ್ತು ಬಳ್ಳಾ, ಹಿರಿಯ ಸಾಹಿತಿ ಡಾ. ಪ್ರಕಾಶ್ ಖಾಡೆ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕುಂಬಾರ ಸೇರಿದಂತೆ ಹಲವು ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.