ಅಯೋಧ್ಯೆ, ಅ. 26: ಪವಿತ್ರ ಶ್ರೀಕ್ಷೇತ್ರ ಅಯೋಧ್ಯೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ನಿರ್ಮಾಣಕ್ಕಾಗಿ ಎರಡು ಸ್ಥಳಗಳಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಅಯೋಧ್ಯೆಗೆ ಭೇಟಿ ನೀಡಿದ ಶ್ರೀಗಳು, ಶ್ರೀಮಠದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಎರಡು ಮಠಗಳ ನಿರ್ಮಾಣ ಕಾರ್ಯಕ್ಕೆ ವೈದಿಕ ವಿಧಿವಿಧಾನಗಳೊಂದಿಗೆ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಠದ ಭಕ್ತರು, ಶಿಷ್ಯವೃಂದ ಹಾಗೂ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

ಭೂಮಿಪೂಜೆಯ ಬಳಿಕ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ತೆರಳಿ ಶ್ರೀರಾಮ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಲೋಕಕಲ್ಯಾಣ, ಶಾಂತಿ, ಸಮೃದ್ಧಿ ಹಾಗೂ ಸಮಸ್ತ ಭಕ್ತರ ಸುಖಶಾಂತಿಗಾಗಿ ಪ್ರಾರ್ಥಿಸಿದರು.

ಅಯೋಧ್ಯೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ನಿರ್ಮಾಣಕ್ಕೆ ಚಾಲನೆ ದೊರೆತಿರುವುದು ಶ್ರೀಮಠದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ. ದೇಶದ ವಿವಿಧ ಭಾಗಗಳಿಂದ ಅಯೋಧ್ಯೆಗೆ ಆಗಮಿಸುವ ಶ್ರೀ ರಾಯರ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಮಠಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

ಮಠಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ಅಗತ್ಯ ಸೌಲಭ್ಯಗಳು ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಈ ಮೂಲಕ ಮಂತ್ರಾಲಯದ ಶ್ರೀಮಠ ಮತ್ತು ಪವಿತ್ರ ಅಯೋಧ್ಯೆ ಕ್ಷೇತ್ರದ ನಡುವಿನ ಆಧ್ಯಾತ್ಮಿಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ.

ಈ ಸಂದರ್ಭದಲ್ಲಿ ಚಿ. ರಾಜ ಅಪ್ರಮೇಯಾಚಾರ್ಯ, ಕರಣಂ ಪ್ರಕಾಶ್, ಬೆಂಗಳೂರಿನ ಸುಬ್ಬನರಸಿಂಹ, ಅಯೋಧ್ಯೆಯ ಶ್ರೀರಾಮ ದೇವರ ಮಂದಿರದ ಪ್ರಧಾನ ಅರ್ಚಕರು, ಶ್ರೀಮಠದ ಆಡಳಿತ ವರ್ಗದ ಸಿಬ್ಬಂದಿ, ಭಕ್ತರು ಹಾಗೂ ಶಿಷ್ಯವೃಂದ ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.