ಹೊಸಪೇಟೆ: ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೇಂದ್ರೀಯ ಮಹಾಮಂಡಳಿಯ ಉಪಾಧ್ಯಕ್ಷ ಹಿರೇಮಠ ಅವರ ನೇತೃತ್ವದಲ್ಲಿ ಹೊಸಪೇಟೆಯಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಒಂಬತ್ತು ವಿಭಾಗಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಮಹಾಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪ್ರತಿನಿಧಿಗಳಾಗಿ ತ್ರೈಮಾಸಿಕ ಸಭೆಗಳಲ್ಲಿ ಭಾಗವಹಿಸಲು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ವತಿಯಿಂದ ನೂತನ ಪದಾಧಿಕಾರಿಗಳನ್ನು ಬಹುಮತದೊಂದಿಗೆ ಆಯ್ಕೆ ಮಾಡಲಾಯಿತು.

ಮಹಾಮಂಡಳಿಯ ಅಧ್ಯಕ್ಷರಾಗಿ ಸಂಗಮನಾಥ, ಗೌರವಾಧ್ಯಕ್ಷರಾಗಿ ಭೀಮರಾವ್ ಯರಗೋಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೀವನ್ ಅವರನ್ನು ಒಂಬತ್ತು ವಿಭಾಗಗಳ ಪ್ರತಿನಿಧಿಗಳ ಬಹುಮತದ ಆಧಾರದ ಮೇಲೆ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಹಾಮಂಡಳಿಯ ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ನೂತನವಾಗಿ ಆಯ್ಕೆಯಾದ ಮೂವರು ಪ್ರಮುಖ ಪದಾಧಿಕಾರಿಗಳಿಗೆ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನೌಕರರ ಹಿತಾಸಕ್ತಿ ರಕ್ಷಣೆ, ಸೇವಾ ಸಮಸ್ಯೆಗಳ ಪರಿಹಾರ ಹಾಗೂ ನಿಗಮದ ಆಡಳಿತದೊಂದಿಗೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಒಂಬತ್ತು ವಿಭಾಗಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರತಿನಿಧಿಗಳು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಆಯ್ಕೆಗೆ ಸಹಕರಿಸಿದ ಎಲ್ಲ ಪ್ರತಿನಿಧಿಗಳಿಗೆ ನೂತನ ಪದಾಧಿಕಾರಿಗಳು ಕೃತಜ್ಞತೆ ವ್ಯಕ್ತಪಡಿಸಿದರು.