ರಾಯಚೂರು: ನಗರದ ಪೆಟ್ಲಾಬುರ್ಜ್ ಸಮೀಪದ ಗಂಗಾನಿವಾಸ ರಸ್ತೆಯಲ್ಲಿರುವ ಗಣೇಶ ಕಟ್ಟೆ ಆಟೋ ನಿಲ್ದಾಣ ಸಂಘದ ವತಿಯಿಂದ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಟೋ ನಿಲ್ದಾಣ ಸಂಘದ ಸದಸ್ಯ ಸಿದ್ದು ಸೂರ್ಯವಂಶಿ, ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿದ್ದರೂ ಅವರ ನೆನಪುಗಳು ಹಾಗೂ ಆದರ್ಶಗಳು ಸದಾ ಜೀವಂತವಾಗಿವೆ. ಕರ್ನಾಟಕದ ಕರ್ಣ ಎಂದೇ ಪ್ರಸಿದ್ಧರಾಗಿದ್ದ ಅಪ್ಪು ಅವರು ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರು ನಮ್ಮೊಂದಿಗಿಲ್ಲ ಎಂಬ ಭಾವನೆ ಯಾರಲ್ಲಿಯೂ ಇಲ್ಲ. ಅವರ ಸಮಾಜಮುಖಿ ಕಾರ್ಯಗಳು ಇಂದಿನ ಯುವಜನತೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಬಲಗೈಯಿಂದ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ತತ್ವವನ್ನು ಪುನೀತ್ ರಾಜ್ಕುಮಾರ್ ಅವರು ಪಾಲಿಸುತ್ತಿದ್ದರು. ಪ್ರಚಾರವಿಲ್ಲದೆ ಮಾಡುವ ಗುಪ್ತದಾನ ಮಹಾಪುಣ್ಯ ಎಂಬ ಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸರಳತೆ, ಮಾನವೀಯತೆ ಹಾಗೂ ಸೇವಾ ಮನೋಭಾವವನ್ನು ಯುವಜನರು ಅನುಸರಿಸಬೇಕು ಎಂದು ತಿಳಿಸಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬರಗಾಲದಿಂದ ರೈತರ ಬದುಕು ದುಸ್ತರವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯಲಿ ಹಾಗೂ ರೈತರ ಸಂಕಷ್ಟ ದೂರವಾಗಲಿ ಎಂದು ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಪ್ರಾರ್ಥಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣೇಶ ಕಟ್ಟೆ ಆಟೋ ನಿಲ್ದಾಣ ಸಂಘದ ಅಧ್ಯಕ್ಷ ಲಕ್ಷ್ಮಣ ಗಾಯಕವಾಡ, ಉಪಾಧ್ಯಕ್ಷ ಕೆ. ವೀರೇಶ, ಕೆ. ವೀರಣ್ಣ, ಜಗದೀಶ ಯಾದವ್, ಬಿ. ಪರಶುರಾಮ, ಹನುಮಂತು, ವಿರುಪಾಕ್ಷಿ, ಸಿದ್ದು ಸೂರ್ಯವಂಶಿ, ಅಲ್ಲಿಪೀರ, ರಾಘವೇಂದ್ರ, ಶಿವಾಜಿ ಸಿಂಧೆ ಹಾಗೂ ಅಪ್ಪು ಅಭಿಮಾನಿಗಳ ಬಳಗದ ಸದಸ್ಯರು ಉಪಸ್ಥಿತರಿದ್ದರು.



