ಸಿಂಧನೂರು, ನ.2: ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರವೂ ಮಹತ್ವದ್ದಾಗಿದೆ. ಶಾಲೆ ಮತ್ತು ಮನೆಯ ನಡುವೆ ಉತ್ತಮ ಸಮನ್ವಯವಿದ್ದು, ಪಾಲಕರು ಶಿಕ್ಷಕರೊಂದಿಗೆ ನಿರಂತರ ಸಹಕಾರ ನೀಡಿದಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯ ಎಂದು ಸರ್ಕಾರಿ ಆದರ್ಶ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಶಿವರಾಜ ಅಭಿಪ್ರಾಯಪಟ್ಟರು.

ನಗರದ ಪಿಎಂ ಶ್ರೀ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ಶಾಲೆಯಲ್ಲಿ ಸೋಮವಾರ ಪ್ರಸಕ್ತ ಶೈಕ್ಷಣಿಕ ಸಾಲಿನ ಮೊದಲ ‘ಸಮುದಾಯದತ್ತ ಶಾಲೆ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ತಾಯಂದಿರ ಹಾಗೂ ಪಾಲಕ-ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಎಂಬಂತೆ ಕೇವಲ ಶಿಕ್ಷಕರ ಪ್ರಯತ್ನದಿಂದ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರಿಬ್ಬರ ಮೇಲೂ ಇದೆ. ಮಕ್ಕಳು ದಿನದಲ್ಲಿ ಐದರಿಂದ ಆರು ಗಂಟೆಗಳ ಕಾಲ ಮಾತ್ರ ಶಾಲೆಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಉಳಿದ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುವುದರಿಂದ ಅವರ ಓದು, ನಡವಳಿಕೆ, ಶಿಸ್ತು ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಪಾಲಕರು ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಸರ್ಕಾರ ಒದಗಿಸುತ್ತಿರುವ ಶೈಕ್ಷಣಿಕ ಸೌಲಭ್ಯಗಳನ್ನು ಪಾಲಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ಉತ್ತಮ ಸಂಸ್ಕಾರ ಹಾಗೂ ಕಲಿಕೆಯ ಆಸಕ್ತಿ ಬೆಳೆಸುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ತಿಳಿಸಿದರು.

ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ವೀರೇಶ ಗೋನವಾರ ಮಾತನಾಡಿ, ಪ್ರೌಢಶಾಲಾ ಹಂತವು ಮಕ್ಕಳ ಜೀವನದಲ್ಲಿ ಅತ್ಯಂತ ಸೂಕ್ಷ್ಮವಾದ ಘಟ್ಟವಾಗಿದೆ. ಈ ವಯಸ್ಸಿನಲ್ಲಿ ಮಕ್ಕಳ ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಆದ್ದರಿಂದ ಪಾಲಕರು ಮಕ್ಕಳೊಂದಿಗೆ ಸ್ನೇಹಪೂರ್ವಕವಾಗಿ ವರ್ತಿಸುವುದರ ಜೊತೆಗೆ ಅವರ ತಪ್ಪುಗಳನ್ನು ಪ್ರೀತಿ ಮತ್ತು ಸಹನೆಯಿಂದ ತಿದ್ದಬೇಕು ಎಂದರು.

ಪ್ರತಿಯೊಬ್ಬ ಪಾಲಕರು ಪ್ರತಿದಿನ ಕನಿಷ್ಠ ಒಂದೆರಡು ಗಂಟೆಗಳ ಕಾಲ ಮಕ್ಕಳಿಗಾಗಿ ಮೀಸಲಿಡಬೇಕು. ಅವರ ಶೈಕ್ಷಣಿಕ ಚಟುವಟಿಕೆಗಳು, ಸ್ನೇಹಿತರ ಒಡನಾಟ, ವರ್ತನೆ ಹಾಗೂ ಕಲಿಕೆಯ ಪ್ರಗತಿಯನ್ನು ಗಮನಿಸಬೇಕು. ಮಕ್ಕಳ ನಡವಳಿಕೆಯಲ್ಲಿ ಅಸಹಜ ಬದಲಾವಣೆ ಕಂಡುಬಂದಲ್ಲಿ ನಿರ್ಲಕ್ಷಿಸದೆ ತಕ್ಷಣ ಶಿಕ್ಷಕರ ಗಮನಕ್ಕೆ ತರಬೇಕು. ಶಾಲೆ ಮತ್ತು ಪಾಲಕರ ನಡುವಿನ ನಿರಂತರ ಸಂಪರ್ಕವು ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಉತ್ತಮಪಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕನ್ನಡ ಭಾಷಾ ಶಿಕ್ಷಕ ಭೀಮರೆಡ್ಡಿ ಹಾಗೂ ಗಣಿತ ಶಿಕ್ಷಕ ಸಾವನ್ ಕೆ. ಅವರು ಮಕ್ಕಳ ನಿರ್ವಹಣೆ, ಮಾನಸಿಕ ಸ್ಥಿತಿ, ವರ್ತನೆ, ಕಲಿಕೆಯಲ್ಲಿ ಎದುರಾಗುವ ಸವಾಲುಗಳು ಹಾಗೂ ಪಾಲಕರ ಜವಾಬ್ದಾರಿಗಳ ಕುರಿತು ವಿಷಯ ಮಂಡಿಸಿದರು.

ಸಭೆಯಲ್ಲಿ ಪಾಲಕರೊಂದಿಗೆ ಸಂವಾದ ನಡೆಸಿ, ತರಗತಿಗಳಲ್ಲಿನ ಬೋಧನಾ ವಿಧಾನ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಮನೆಗೆಲಸ, ಶಿಸ್ತು ಹಾಗೂ ಮನೆಯಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸಲಹೆಗಳನ್ನು ಶಿಕ್ಷಕರು ಮತ್ತು ಪಾಲಕರು ಪರಸ್ಪರ ವಿನಿಮಯ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಫಲಿತಾಂಶವನ್ನು ಆಯಾ ವಿಷಯಗಳ ಶಿಕ್ಷಕರು ಪಾಲಕರಿಗೆ ವಿವರಿಸಿದರು. ವಿದ್ಯಾರ್ಥಿಗಳ ಕಲಿಕಾ ಸಾಧನೆ, ಸುಧಾರಣೆ ಅಗತ್ಯವಿರುವ ವಿಷಯಗಳು ಹಾಗೂ ಮುಂದಿನ ಶೈಕ್ಷಣಿಕ ಗುರಿಗಳ ಕುರಿತು ಮಾಹಿತಿ ನೀಡಲಾಯಿತು.

ಅಲ್ಲದೆ, ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲಾದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯ ಶೇಖರಯ್ಯ ಸ್ವಾಮಿ ಜವಳಗೇರಾ, ಶಿಕ್ಷಕರಾದ ಮೌನೇಶಪ್ಪ, ಬಸವರಾಜ ಆನೆಗುಂದಿ, ಮಲ್ಲಪ್ಪ ಕೆ., ದೀಪಿಕಾ ಪಾಟೀಲ್, ಜಡೇಶ, ಉಮೇಶ, ಅಕ್ಕಮಹಾದೇವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಾಲಕರಾದ ವಕೀಲ ವೀರಭದ್ರಪ್ಪ, ಉಪನ್ಯಾಸಕ ಶಂಕ್ರಪ್ಪ ಬಿ. ವಜ್ರಬಂಡಿ, ವಿನೋದ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಮತ್ತು ಪಾಲಕರು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿಹೇಳಲಾಯಿತು.