ದೇವದುರ್ಗ: ಮೊಬೈಲ್ಗಳ ಅತಿಯಾದ ಬಳಕೆ, ಅಪರಿಚಿತ ಸಂದೇಶಗಳು, ಆನ್ಲೈನ್ ಗೇಮ್ಗಳು ಹಾಗೂ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಕುರಿತು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕ್ರೈ ಸಂಸ್ಥೆಯ ವತಿಯಿಂದ ತಾಲೂಕಿನ ಮುಷ್ಟೂರು ಗ್ರಾಮದ ಶಾಲೆಯಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸುವ ಮೂಲಕ ಮೊಬೈಲ್ ಬಳಕೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳು, ಆನ್ಲೈನ್ ಗೇಮ್ಗಳ ದುಷ್ಪರಿಣಾಮಗಳು ಹಾಗೂ ಅಪರಿಚಿತರ ಸಂಪರ್ಕದಿಂದ ಎದುರಾಗಬಹುದಾದ ಸೈಬರ್ ವಂಚನೆಗಳ ಕುರಿತು ಜಾಗೃತಿ ಮೂಡಿಸಿದರು.
ಮೊಬೈಲ್ಗೆ ಬರುವ ಅಪರಿಚಿತ ಸಂದೇಶಗಳು, ಅನುಮಾನಾಸ್ಪದ ಲಿಂಕ್ಗಳು ಹಾಗೂ ಆನ್ಲೈನ್ ಮೂಲಕ ಪರಿಚಯವಾಗುವ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂಬ ಸಂದೇಶವನ್ನು ನಾಟಕದ ಮೂಲಕ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಣ್ಣ ಗಣೇಕಲ್, ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆ ಅನಿವಾರ್ಯವಾಗಿದ್ದರೂ ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ವಿಶೇಷವಾಗಿ ಮಕ್ಕಳು ಮೊಬೈಲ್ಗಳ ಅತಿಯಾದ ಬಳಕೆಯಿಂದ ದೂರವಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ನಿರಂತರವಾಗಿ ಮೊಬೈಲ್ನಲ್ಲಿ ತೊಡಗಿಸಿಕೊಳ್ಳುವುದರಿಂದ ಓದಿನ ಕಡೆ ಗಮನ ಕಡಿಮೆಯಾಗುವುದರ ಜೊತೆಗೆ ಮಾನಸಿಕ ಒತ್ತಡವೂ ಹೆಚ್ಚಾಗಬಹುದು. ಆದ್ದರಿಂದ ಮಕ್ಕಳು ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಓದು, ಆಟೋಟ ಹಾಗೂ ಇತರ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಸರಿಯಾದ ಸಮಯಕ್ಕೆ ಊಟ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ತಂದೆ-ತಾಯಿಯ ಮಾರ್ಗದರ್ಶನಕ್ಕೆ ಗೌರವ ನೀಡಿ, ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಸೈಬರ್ ವಂಚನೆಗಳ ಬಗ್ಗೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಪಾಲಕರು ಹಾಗೂ ಸಾರ್ವಜನಿಕರೂ ಜಾಗೃತರಾಗಬೇಕು. ಅಪರಿಚಿತ ವ್ಯಕ್ತಿಗಳಿಂದ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸುವಾಗ ಎಚ್ಚರಿಕೆ ವಹಿಸಬೇಕು. ಮೊಬೈಲ್ ಮತ್ತು ಇಂಟರ್ನೆಟ್ಗಳನ್ನು ಶಿಕ್ಷಣ ಹಾಗೂ ಜ್ಞಾನಾರ್ಜನೆಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು.
ಜಾಗೃತಿ ಅಭಿಯಾನದ ಅಂಗವಾಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಜಾಗೃತಿ ಪೋಸ್ಟರ್ಗಳನ್ನು ಶಾಲೆಯ ಗೋಡೆಗಳಿಗೆ ಅಂಟಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ದೇವದುರ್ಗ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ, ಕ್ರೈ ಸಂಸ್ಥೆಯ ಪ್ರತಿನಿಧಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷ ವೆಂಕಟೇಶ, ನಾಗರತ್ನ, ಖಾಜಾಬಿ, ರೇಣುಕಾ, ಸವಿತಾ, ಮುಷ್ಟೂರು ಶಾಲೆಯ ಶಿಕ್ಷಕರು, ಇಸಿಒ ಶರಣಪ್ಪ, ಗಂಗಾಧರ, ಆನಂದ, ನೀಲಗಲ್, ಆಲಿಯಾ ಬೇಗಂ ಹಾಗೂ ಮಲ್ಲಯ್ಯ ಖಾನಾಪುರ ಉಪಸ್ಥಿತರಿದ್ದರು.



