ರಾಯಚೂರು, ನ.2: ನಗರದ ಎಲ್ಬಿಎಸ್ ನಗರದಲ್ಲಿ ನಡೆದ ಉದ್ಯಮಿ ಬಾಪುರು ನರಸಿಂಹಯ್ಯ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ತಿಲಕ್ ಸಿಂಗ್ನನ್ನು ಕ್ಷಿಪ್ರವಾಗಿ ಬಂಧಿಸಿದ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಆರ್ಡಿಸಿಸಿಐ) ಶ್ಲಾಘಿಸಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ನಗರದಲ್ಲಿ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಲಪಡಿಸುವಂತೆ ಮನವಿ ಮಾಡಿದೆ.
ಸಂಸ್ಥೆಯ ಅಧ್ಯಕ್ಷ ಎಸ್. ಕಮಲ್ ಕುಮಾರ್ ಹಾಗೂ ಕಾರ್ಯದರ್ಶಿ ವೈ. ಜಂಬಣ್ಣ ನೇತೃತ್ವದ ನಿಯೋಗವು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಶಾಂತವೀರ ಇ. ಅವರನ್ನು ಎಸ್ಪಿ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ನಗರದ ಎಲ್ಬಿಎಸ್ ನಗರದಲ್ಲಿ 38 ವರ್ಷದ ಉದ್ಯಮಿ ಬಾಪುರು ನರಸಿಂಹಯ್ಯ ಅವರ ಹತ್ಯೆ ನಡೆದ ಬಳಿಕ ಮಾರುಕಟ್ಟೆ ಯಾರ್ಡ್ ಪೊಲೀಸ್ ಠಾಣೆಯ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ತಿಲಕ್ ಸಿಂಗ್ನನ್ನು ಬಂಧಿಸಿರುವುದು ಶ್ಲಾಘನೀಯವಾಗಿದೆ. ಪೊಲೀಸ್ ಇಲಾಖೆಯ ಈ ಕ್ರಮದಿಂದ ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿದೆ ಎಂದು ನಿಯೋಗದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಆದರೆ, ಉದ್ಯಮಿಯ ಹತ್ಯೆ ಘಟನೆಯಿಂದ ನಗರದ ವ್ಯಾಪಾರಿಗಳು, ಅಂಗಡಿಕಾರರು ಹಾಗೂ ಸಣ್ಣ ಉದ್ಯಮಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ವರದಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸಮಗ್ರ ದೋಷಾರೋಪಣ ಪಟ್ಟಿಯನ್ನು ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಕರಣದ ವಿಚಾರಣೆ ತ್ವರಿತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನಗರದ ಎಲ್ಬಿಎಸ್ ನಗರ, ಪ್ರಮುಖ ಮಾರುಕಟ್ಟೆ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಹಾಗೂ ವ್ಯಾಪಾರ ಚಟುವಟಿಕೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಹಗಲು ಮತ್ತು ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಸಮಾಜವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ವ್ಯಾಪಾರಿಗಳು ನಿರ್ಭೀತಿಯಿಂದ ತಮ್ಮ ವ್ಯವಹಾರಗಳನ್ನು ನಡೆಸಲು ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸಣ್ಣ ವ್ಯಾಪಾರಿಗಳಿಂದ ಬಲವಂತವಾಗಿ ಹಣ ವಸೂಲಿ ಮಾಡುವುದು, ಉಚಿತವಾಗಿ ಸರಕುಗಳನ್ನು ನೀಡುವಂತೆ ಒತ್ತಾಯಿಸುವುದು, ಬೆದರಿಕೆ ಹಾಕುವುದು ಹಾಗೂ ಹಫ್ತಾ ವಸೂಲಿ ಮಾಡುವಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವ್ಯಾಪಾರಿಗಳಿಗೆ ಬೆದರಿಕೆ ಅಥವಾ ಕಿರುಕುಳ ನೀಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ರಾತ್ರಿ ವೇಳೆ ನಡೆಯುವ ಅಕ್ರಮ ಮದ್ಯಪಾನ ಹಾಗೂ ಮಾದಕವಸ್ತು ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದರ ಜೊತೆಗೆ ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಅಳವಡಿಸಿರುವ ಸಾರ್ವಜನಿಕ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಕ್ಯಾಮೆರಾಗಳ ನಿರ್ವಹಣೆ ಮತ್ತು ನಿರಂತರ ಮೇಲ್ವಿಚಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್ಡಿಸಿಸಿಐ ಅಧ್ಯಕ್ಷ ಎಸ್. ಕಮಲ್ ಕುಮಾರ್, ರಾಯಚೂರು ನಗರದ ಆರ್ಥಿಕ ಚಟುವಟಿಕೆಗಳಲ್ಲಿ ವ್ಯಾಪಾರಿ ಸಮುದಾಯ ಪ್ರಮುಖ ಪಾತ್ರ ವಹಿಸುತ್ತಿದೆ. ವ್ಯಾಪಾರಿಗಳು ಸುರಕ್ಷಿತ ವಾತಾವರಣದಲ್ಲಿ ತಮ್ಮ ಉದ್ಯಮಗಳನ್ನು ನಡೆಸಲು ಪೊಲೀಸ್ ಇಲಾಖೆಯ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಉದ್ಯಮಿ ಕೊಲೆ ಪ್ರಕರಣದ ಆರೋಪಿಯನ್ನು ತ್ವರಿತವಾಗಿ ಬಂಧಿಸಿರುವ ಪೊಲೀಸ್ ಇಲಾಖೆಯ ಕ್ರಮವನ್ನು ವ್ಯಾಪಾರಿ ಸಮುದಾಯ ಸ್ವಾಗತಿಸುತ್ತದೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳುವ ಎಲ್ಲ ರಚನಾತ್ಮಕ ಕ್ರಮಗಳಿಗೆ ವಾಣಿಜ್ಯೋದ್ಯಮ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ನಿಯೋಗದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾದ ತ್ರಿವಿಕ್ರಮ್ ಜೋಶಿ, ಸಾವಿತ್ರಿ ಪುರುಷೋತ್ತಮ್, ಅಂಬಾಟಿ ವೆಂಕಟರಾಜ್ ಗುಪ್ತಾ, ಕೆ.ವಿ. ಮನೋಹರ್ ಹಾಗೂ ಚೇತನ್ ದೋಕ ಸೇರಿದಂತೆ ಇತರರು ಉಪಸ್ಥಿತರಿದ್ದರು.



