ರಾಯಚೂರು, ನ.6: ರಾಯಚೂರು ಜಿಲ್ಲೆಯ ಯುವಕ-ಯುವತಿಯರು ಕೇವಲ ಜಿಲ್ಲೆಯೊಳಗೆ ಮಾತ್ರ ಸ್ಪರ್ಧಿಸುವುದಕ್ಕೆ ಸೀಮಿತವಾಗದೆ, ಇತರೆ ಜಿಲ್ಲೆಗಳ ಅಭ್ಯರ್ಥಿಗಳೊಂದಿಗೆ ಸಮರ್ಥವಾಗಿ ಪೈಪೋಟಿ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು. ಆ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಕರೆ ನೀಡಿದರು.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ರಾಯಚೂರು ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಪೂರ್ವಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಗುರುತಿಸಲಾಗಿದೆ. ಜಿಲ್ಲೆ ಯಾವ ಕಾರಣಗಳಿಂದ ಹಿಂದುಳಿದಿದೆ ಎಂಬುದನ್ನು ಇಲ್ಲಿಯೇ ಹುಟ್ಟಿ ಬೆಳೆದ ಯುವಜನರು ಚೆನ್ನಾಗಿ ಅರಿತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕೇವಲ ಸರ್ಕಾರದ ಯೋಜನೆಗಳು, ಅನುದಾನ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯವಿಲ್ಲ. ಇಲ್ಲಿನ ಯುವಜನರು ಉತ್ತಮ ಶಿಕ್ಷಣ ಪಡೆದು ಉದ್ಯೋಗಸ್ಥರಾಗಬೇಕು. ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ರಸ್ತೆಗಳ ನಿರ್ಮಾಣ, ಶೌಚಾಲಯಗಳ ವ್ಯವಸ್ಥೆ, ಮೂಲಸೌಕರ್ಯಗಳ ಒದಗಿಸುವಿಕೆ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನ ಅಭಿವೃದ್ಧಿಯ ಪ್ರಮುಖ ಭಾಗಗಳಾಗಿವೆ. ಆದರೆ ಇವುಗಳ ಜೊತೆಗೆ ಯುವಜನರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಬೇಕು. ಉದ್ಯಮಗಳನ್ನು ಸ್ಥಾಪಿಸಿ ಇತರರಿಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮಟ್ಟಕ್ಕೆ ಬೆಳೆಯಬೇಕು. ಪ್ರತಿಯೊಬ್ಬರ ಆದಾಯ ಮತ್ತು ಉದ್ಯೋಗದ ಮೂಲಕ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದಾಗ ಮಾತ್ರ ಜಿಲ್ಲೆ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ. ಪ್ರಸ್ತುತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಕೆಲವರು ಹೊಸದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದ್ದರೆ, ಇನ್ನೂ ಕೆಲವರು ಹಲವು ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೂ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯವಿದೆ ಎಂದು ತಿಳಿಸಿದರು.
ತರಬೇತಿ ಕಾರ್ಯಕ್ರಮಗಳ ಮೂಲಕ ಯಾವ ವಿಷಯಗಳನ್ನು ಓದಬೇಕು, ಹೇಗೆ ಅಧ್ಯಯನ ಮಾಡಬೇಕು ಹಾಗೂ ಪರೀಕ್ಷೆಗಳಿಗೆ ಯಾವ ರೀತಿಯಲ್ಲಿ ಸಿದ್ಧತೆ ನಡೆಸಬೇಕು ಎಂಬುದನ್ನು ತಿಳಿಸಿಕೊಡಬಹುದು. ಆದರೆ ನಿಜವಾದ ಪರಿಶ್ರಮ ಅಭ್ಯರ್ಥಿಗಳಿಂದಲೇ ಬರಬೇಕು. ಬೇರೆಯವರು ನೀಡುವ ಪ್ರೇರಣೆ ತಾತ್ಕಾಲಿಕವಾಗಿರುತ್ತದೆ. ಪ್ರತಿಯೊಬ್ಬರಲ್ಲಿಯೂ ಸ್ವಯಂ ಪ್ರೇರಣೆ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಮತ್ತೆ ಮತ್ತೆ ಪ್ರಯತ್ನಿಸುವ ಮನೋಭಾವ ಇರಬೇಕು. ಸಾಧಿಸಬೇಕೆಂಬ ದೃಢಸಂಕಲ್ಪವಿಲ್ಲದಿದ್ದರೆ ಹೊರಗಿನ ಪ್ರೇರಣೆ ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಮ್ಮ ಯುಪಿಎಸ್ಸಿ ಪರೀಕ್ಷೆಯ ಸಿದ್ಧತೆಯ ಅನುಭವವನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು, ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪರೀಕ್ಷೆಯನ್ನೂ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ. ಉದ್ಯೋಗವನ್ನು ತೊರೆದು ಪರೀಕ್ಷೆಗೆ ಸಿದ್ಧತೆ ಆರಂಭಿಸಿದಾಗ ಕೋಚಿಂಗ್ ಕೇಂದ್ರದಲ್ಲಿ ನಾಲ್ಕೈದು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದ ಅಭ್ಯರ್ಥಿಗಳಿದ್ದರು. ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ಇತರರು ಸುಲಭವಾಗಿ ಉತ್ತರಿಸುತ್ತಿದ್ದರೆ, ಆರಂಭದಲ್ಲಿ ತಮಗೆ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಉದ್ಯೋಗವನ್ನು ಬಿಟ್ಟು ಬಂದ ನಿರ್ಧಾರ ಸರಿಯೇ ಎಂಬ ಅನುಮಾನವೂ ಕಾಡಿತ್ತು. ಆದರೆ ತಮ್ಮ ಗುರಿಯನ್ನು ತಾವೇ ನಿರ್ಧರಿಸಿಕೊಂಡಿರುವುದರಿಂದ ಅದನ್ನು ಸಾಧಿಸಲೇಬೇಕೆಂಬ ದೃಢನಿಶ್ಚಯ ಮಾಡಿದ್ದೆ. ಮೊದಲ ವರ್ಷ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಲ್ಲ. ಎರಡನೇ ವರ್ಷ ಕುಟುಂಬದವರು ಮದುವೆಯ ಬಗ್ಗೆ ಮಾತನಾಡಲು ಆರಂಭಿಸಿದರು. ಆದರೆ ಉದ್ಯೋಗ ಪಡೆದು ಗುರಿ ಸಾಧಿಸುವವರೆಗೆ ಮದುವೆಯಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬದ್ಧಳಾಗಿದ್ದೆ ಎಂದು ಹೇಳಿದರು.
ಮೂರನೇ ವರ್ಷವೂ ಪರೀಕ್ಷೆಗೆ ಸಿದ್ಧತೆ ಮುಂದುವರಿಸಿದೆ. ನಾಲ್ಕನೇ ವರ್ಷದಲ್ಲಿ ಕುಟುಂಬದವರು ಯಾವುದಾದರೂ ಉದ್ಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರೂ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿಯನ್ನು ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಸತತ ನಾಲ್ಕನೇ ಪ್ರಯತ್ನದಲ್ಲಿ, ನಾಲ್ಕು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಯಶಸ್ಸು ದೊರೆಯಿತು ಎಂದು ತಮ್ಮ ಅನುಭವವನ್ನು ವಿವರಿಸಿದರು.
ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದು, ಬೇರೆ ರಾಜ್ಯಗಳಿಗೆ ತೆರಳಿ ಅಧ್ಯಯನ ಮಾಡುವುದು ಸೂಕ್ತವಲ್ಲ ಎಂದು ಹೇಳುತ್ತಿದ್ದವರೇ ಇಂದು ತಮ್ಮ ಹೆಣ್ಣುಮಕ್ಕಳನ್ನು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ತಮ್ಮ ಊರು ಹಾಗೂ ಸಮಾಜದ ಜನರು ಮಕ್ಕಳಿಗೆ ಮಾರ್ಗದರ್ಶನ ನೀಡುವಂತೆ ಕೇಳುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಒಬ್ಬ ಯುವಕ ಅಥವಾ ಯುವತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರೆ, ಅವರನ್ನು ನೋಡಿ ಅದೇ ಗ್ರಾಮದ ಕನಿಷ್ಠ ಹತ್ತು ಯುವಜನರಾದರೂ ಕೆಪಿಎಸ್ಸಿ, ಯುಪಿಎಸ್ಸಿ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಲು ಪ್ರೇರಣೆ ಪಡೆಯುತ್ತಾರೆ. ಆದ್ದರಿಂದ ಅಭ್ಯರ್ಥಿಗಳು ಕೇವಲ ವೈಯಕ್ತಿಕ ಯಶಸ್ಸಿಗಾಗಿ ಅಧ್ಯಯನ ಮಾಡದೆ, ತಮ್ಮ ಕುಟುಂಬ, ಸಮಾಜ, ಗ್ರಾಮ ಹಾಗೂ ಇಡೀ ಜಿಲ್ಲೆಗೆ ಮಾದರಿಯಾಗುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹಪಾತ್ರ ಮಾತನಾಡಿ, ನಿಜವಾದ ಕನಸು ಮನುಷ್ಯನನ್ನು ನಿದ್ರಿಸಲು ಬಿಡುವುದಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯಲ್ಲಿಯೂ ಸಾಧಿಸುವ ಶಕ್ತಿ ಮತ್ತು ಸಾಮರ್ಥ್ಯವಿದೆ. ಈ ಉಚಿತ ತರಬೇತಿಯ ಸದುಪಯೋಗ ಪಡೆದುಕೊಂಡು ಛಲದಿಂದ ಅಧ್ಯಯನ ನಡೆಸಿದರೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರ ಯಶಸ್ಸಿನ ಹಾದಿಯೂ ವಿಭಿನ್ನವಾಗಿರುತ್ತದೆ. ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ಇಲ್ಲಿನ ಯುವಜನರು ಹೆಚ್ಚಿನ ಪರಿಶ್ರಮದೊಂದಿಗೆ ಮುಂದೆ ಬರಬೇಕು. ಸರ್ಕಾರಿ ಉದ್ಯೋಗಗಳಿಗೆ ತೀವ್ರ ಸ್ಪರ್ಧೆ ಇರುವುದರಿಂದ ಅಭ್ಯರ್ಥಿಗಳು ಸಮರ್ಪಣಾ ಭಾವದಿಂದ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.
ರಾಯಚೂರು ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ ಮಾತನಾಡಿ, ಈ ಹಿಂದೆ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಧಾರವಾಡ, ಬೆಂಗಳೂರು ಅಥವಾ ಹೈದರಾಬಾದ್ನಂತಹ ನಗರಗಳಿಗೆ ತೆರಳಬೇಕಾಗಿತ್ತು. ಆದರೆ ಇದೀಗ ರಾಯಚೂರಿನಲ್ಲಿಯೇ ತರಬೇತಿ ಮತ್ತು ಅಧ್ಯಯನಕ್ಕೆ ಅಗತ್ಯ ಸೌಲಭ್ಯಗಳು ಲಭ್ಯವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಅಭ್ಯರ್ಥಿಗಳು ತಾವು ಅಧ್ಯಯನ ಮಾಡಬೇಕಾದ ವಿಷಯಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದಿರಬೇಕು. ಸ್ವಯಂ ಪ್ರೇರಣೆಯೊಂದಿಗೆ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡರೆ ನಿರಂತರ ಅಧ್ಯಯನ ಬೇಸರ ಉಂಟುಮಾಡುವುದಿಲ್ಲ. ಪರೀಕ್ಷೆಗಳ ಸಿದ್ಧತೆ ಹಾಗೂ ಯಶಸ್ಸಿನ ಜವಾಬ್ದಾರಿ ಅಂತಿಮವಾಗಿ ಅಭ್ಯರ್ಥಿಗಳ ಮೇಲೆಯೇ ಇರುತ್ತದೆ ಎಂದು ಹೇಳಿದರು.
ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಜ್ಞಾನಾರ್ಜನೆ ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಸಾಧನವಾಗಿದೆ. ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕಾದರೆ ನಿರಂತರ ಅಧ್ಯಯನ ಅತ್ಯಗತ್ಯ. 'ತಲೆಬಾಗಿ ಓದು, ನಿನ್ನನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ' ಎಂಬ ಮಾತಿನಂತೆ ವಿದ್ಯಾರ್ಥಿಗಳು ಪುಸ್ತಕಗಳೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ರಾಯಚೂರು ಜಿಲ್ಲೆಯಲ್ಲಿ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಆದರೆ ವಿವಿಧ ಸರ್ಕಾರಿ ನೇಮಕಾತಿಗಳಲ್ಲಿ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ ಪ್ರಮಾಣ ಕಡಿಮೆ ಇರುವುದು ಗಮನಾರ್ಹವಾಗಿದೆ. ಪ್ರತಿಭೆಯಿದ್ದರೂ ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಲು ಸೂಕ್ತ ಮಾರ್ಗದರ್ಶನ ಅಗತ್ಯವಿದೆ. ಇಂತಹ ಉಚಿತ ತರಬೇತಿ ಕೇಂದ್ರಗಳು ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲ ಒದಗಿಸಲಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ಸಿದ್ದಾರ್ಥ ಭಾವಿಕಟ್ಟಿ, ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ತಜ್ಞ ನಂಜಾನಾಯಕ್, ನಗರ ಕೇಂದ್ರ ಗ್ರಂಥಾಲಯ ಅಧಿಕಾರಿ ನಿರ್ಮಲಾ, ವಿಶೇಷ ಕಾರ್ಯಕ್ರಮ ಅಧಿಕಾರಿ ಮೊಹಮ್ಮದ್ ಯೂಸುಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



