ರಾಯಚೂರು, ನ.5: ಹನ್ನೆರಡನೇ ಶತಮಾನದ ವಚನ ಸಾಹಿತ್ಯವು ಕೇವಲ ಧಾರ್ಮಿಕ ಚಳವಳಿಗೆ ಸೀಮಿತವಾಗದೆ, ಸಮಾಜದಲ್ಲಿದ್ದ ಮೂಢನಂಬಿಕೆ, ಜಾತೀಯತೆ, ಅಸಮಾನತೆ ಹಾಗೂ ಲಿಂಗಭೇದದ ವಿರುದ್ಧ ಜನಜಾಗೃತಿ ಮೂಡಿಸಿದ ಮಹತ್ವದ ವೈಚಾರಿಕ ಕ್ರಾಂತಿಯಾಗಿದೆ ಎಂದು ಲಿಂಗಸುಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ದೊಡ್ಡಬಸಪ್ಪ ಸಿದ್ದನಗೌಡ ಹುಡೇದಗಡ್ಡಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ವಚನಗಳಲ್ಲಿ ವೈಚಾರಿಕತೆ ಹಾಗೂ ಸಾಮಾಜಿಕ ಪ್ರಜ್ಞೆ’ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನಕಾರರು ಸಮಾಜದಲ್ಲಿ ಬೇರೂರಿದ್ದ ಮೇಲು-ಕೀಳು, ಜಾತಿ-ವರ್ಗ ಹಾಗೂ ಸ್ತ್ರೀ-ಪುರುಷ ತಾರತಮ್ಯವನ್ನು ಖಂಡಿಸಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಸೇರಿದಂತೆ ಶೋಷಿತ ಸಮುದಾಯಗಳಿಂದ ಬಂದ ಶರಣರಿಗೂ ವಚನ ರಚನೆಯಲ್ಲಿ ಅವಕಾಶ ಕಲ್ಪಿಸುವ ಮೂಲಕ ಸಮಾನತೆಯ ಆಶಯವನ್ನು ಬಲಪಡಿಸಿದರು. ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಶ್ರಮದ ಗೌರವ, ಸಾಮಾಜಿಕ ನ್ಯಾಯ ಹಾಗೂ ಪರಸ್ಪರ ಸಹಕಾರದ ಮಹತ್ವವನ್ನು ಸಾರಿದರು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ಮಾತನಾಡಿ, ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ರಚನೆಯಾದ ವಚನಗಳು ಸಮಾನತೆ, ದಯೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತವೆ. ವಿದ್ಯಾರ್ಥಿನಿಯರು ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಐಕ್ಯೂಎಸಿ ಸಂಯೋಜಕಿ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿಯೇ ಮಹಿಳೆಯರಿಗೆ ಅಭಿವ್ಯಕ್ತಿ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿದ ವಚನ ಚಳವಳಿ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದೆ. ವಿದ್ಯಾರ್ಥಿನಿಯರು ವಚನ ಸಾಹಿತ್ಯದ ಆಶಯಗಳನ್ನು ಅರಿತು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಚನ್ನಬಸವ ವಿಶೇಷ ಉಪನ್ಯಾಸಕರನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಹ ಸಂಯೋಜಕ ಶರಣೆಗೌಡ, ಪ್ರಾಧ್ಯಾಪಕರಾದ ಡಾ. ಸಯ್ಯದ ರಶೀದ ಪರ್ವೀನ್, ರಂಗನಾಥ ಬಿಲ್ಲಾರ್, ಡಾ. ಸ್ವರೂಪರಾಣಿ, ಡಾ. ಉಮಾದೇವಿ, ಸುಮಿತ್ರಾ ಪ್ಯಾಟಿ, ಡಾ. ಸಂತೋಷ ರೇವೂರ, ಸರಸ್ವತಿ ಕೆ., ಡಾ. ಅಸ್ಮಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಸನ್ನಕುಮಾರ್, ಗ್ರಂಥಪಾಲಕ ಡಾ. ಸುರೇಶ ಶರಣಪ್ಪ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಂಜನಾ ಪ್ರಾರ್ಥಿಸಿದರು. ಡಾ. ಪುಷ್ಪಾವತಿ ಸ್ವಾಗತಿಸಿದರು. ಡಾ. ಅಳ್ಳಪ್ಪ ನಿರೂಪಿಸಿದರು. ಡಾ. ಪ್ರಕಾಶ ಬುದ್ದಿನ್ನಿ ವಂದಿಸಿದರು.