ರಾಯಚೂರು: ತಾಲೂಕಿನ ದೇವಸೂಗೂರು ಹೋಬಳಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ನವೆಂಬರ್ 7ರಂದು ಶಕ್ತಿನಗರದ ಕೃಷ್ಣ ಅತಿಥಿ ಗೃಹದಲ್ಲಿ ನಡೆಯಿತು.

ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಚಾಲಕ ರಾಮಸ್ವಾಮಿ ಆರೋಲಿ, ತಾಲೂಕು ಅಧ್ಯಕ್ಷ ಸುರೇಶ್ ಪಿ. ಹಾಗೂ ಕೃಷ್ಣ ಘಂಟಿ ಅವರ ನೇತೃತ್ವದಲ್ಲಿ ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಮಾತನಾಡಿದ ಮುಖಂಡರು, ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ಸಂಘಟನೆ ಮೇಲಿದೆ. ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ, ಶೋಷಿತರ ಸಬಲೀಕರಣ ಹಾಗೂ ಶೈಕ್ಷಣಿಕ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ನೂತನ ಘಟಕದ ಗೌರವಾಧ್ಯಕ್ಷರಾಗಿ ಹರೀಶ್ ರೆಡ್ಡಿ, ಅಧ್ಯಕ್ಷರಾಗಿ ಸುರೇಶ್ ಪಾಣಿ, ಉಪಾಧ್ಯಕ್ಷರಾಗಿ ಪದ್ಮನಾಭಸ್ವಾಮಿ, ಸಂಚಾಲಕರಾಗಿ ಬಿ. ಸುನಿಲ್ ಕುಮಾರ್, ಸಂಘಟನಾ ಅಧ್ಯಕ್ಷರಾಗಿ ಬಿ. ಅನಿಲ್ ಕುಮಾರ್, ಉಸ್ತುವಾರಿ ಅಧ್ಯಕ್ಷರಾಗಿ ಚಿನ್ನ ಸೂರ್ಯ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರ ಮಡಿವಾಳ, ಕಾರ್ಯದರ್ಶಿಯಾಗಿ ನಾಗರಾಜ್ ಎನ್., ಯುವ ಘಟಕದ ಅಧ್ಯಕ್ಷರಾಗಿ ನರಸಿಂಹ ಪಾಣಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವಶಂಕರ್, ಖಜಾಂಚಿಯಾಗಿ ಸುರೇಶ್ ಎನ್. ಹಾಗೂ ಸಂಘಟನಾ ಸಲಹೆಗಾರರಾಗಿ ಹನುಮೇಶ್ ಅವರನ್ನು ಆಯ್ಕೆ ಮಾಡಲಾಯಿತು.

ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಸಾಮಾಜಿಕ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ನಡೆಸಿ, ಹೋಬಳಿ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಲು ನೂತನ ಪದಾಧಿಕಾರಿಗಳು ಸಂಕಲ್ಪ ವ್ಯಕ್ತಪಡಿಸಿದರು.