ಮಾನ್ವಿ: ನಾಡಿನ ಇತಿಹಾಸದಲ್ಲಿ ಅಪ್ರತಿಮ ಧೈರ್ಯ, ಸಾಹಸ ಮತ್ತು ಶೌರ್ಯದಿಂದ ಗುರುತಿಸಿಕೊಂಡಿರುವ ವೀರವನಿತೆ ಒನಕೆ ಓಬವ್ವ ಅವರ ಆದರ್ಶಗಳನ್ನು ಪ್ರತಿಯೊಬ್ಬ ಮಹಿಳೆಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
18ನೇ ಶತಮಾನದಲ್ಲಿ ಚಿತ್ರದುರ್ಗದ ಕೋಟೆಯ ಪಾಳೆಗಾರರಾಗಿದ್ದ ಮದಕರಿ ನಾಯಕನ ಆಳ್ವಿಕೆಯಲ್ಲಿ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪ ಅವರ ಪತ್ನಿಯಾಗಿದ್ದ ಒನಕೆ ಓಬವ್ವ, ತಮ್ಮ ಅಪ್ರತಿಮ ಸಾಹಸದಿಂದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯ ಕಿಂಡಿಯ ಮೂಲಕ ಒಳನುಗ್ಗಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಓಬವ್ವ, ಯಾವುದೇ ಯುದ್ಧ ತರಬೇತಿ ಇಲ್ಲದಿದ್ದರೂ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಒನಕೆಯನ್ನೇ ಆಯುಧವನ್ನಾಗಿ ಬಳಸಿಕೊಂಡು ಶತ್ರು ಸೈನಿಕರನ್ನು ಎದುರಿಸಿದರು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೋಟೆಯ ರಕ್ಷಣೆಗೆ ಮುಂದಾದ ಅವರ ಸಾಹಸವು ನಾಡಿನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಒನಕೆ ಓಬವ್ವ ಅವರ ಶೌರ್ಯವು ಮಹಿಳೆಯರ ಆತ್ಮವಿಶ್ವಾಸ, ಸ್ವಾಭಿಮಾನ ಹಾಗೂ ಸಾಹಸಪ್ರವೃತ್ತಿಗೆ ಉತ್ತಮ ಉದಾಹರಣೆಯಾಗಿದೆ. ಸಂಕಷ್ಟದ ಸಂದರ್ಭಗಳಲ್ಲಿ ಎದೆಗುಂದದೆ ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಇಂದಿನ ಯುವತಿಯರು ಓಬವ್ವ ಅವರ ಜೀವನಾದರ್ಶಗಳಿಂದ ಸ್ಫೂರ್ತಿ ಪಡೆದು ಶಿಕ್ಷಣ, ಸಾಮಾಜಿಕ ಸೇವೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯಬೇಕು ಎಂದು ಕರೆ ನೀಡಿದರು.
ನಾಡಿನ ವೀರವನಿತೆಯರ ಸಾಲಿನಲ್ಲಿ ಒನಕೆ ಓಬವ್ವ ಅವರಿಗೆ ವಿಶಿಷ್ಟ ಸ್ಥಾನವಿದ್ದು, ಅವರ ತ್ಯಾಗ, ದೇಶಪ್ರೇಮ ಮತ್ತು ಸಾಹಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.



