ದೇವದುರ್ಗ, ನ.11: ಬಿಸಿಯೂಟ ಸಿಬ್ಬಂದಿಯ ಉದ್ಯೋಗಕ್ಕೆ ಧಕ್ಕೆ ತರುವ ಸೆಂಟ್ರಲ್ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೊಳಿಸುವ ನಿರ್ಧಾರವನ್ನು ಕೈಬಿಟ್ಟು, ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಪದಾಧಿಕಾರಿಗಳು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಧಾದೇವಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಮನವಿ ಸಲ್ಲಿಸಿದ ಸಂಘದ ಮುಖಂಡರು, ಬಿಸಿಯೂಟ ಯೋಜನೆಯಡಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೊಳಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

2001ರಿಂದ ಜಾರಿಯಲ್ಲಿರುವ ಬಿಸಿಯೂಟ ಯೋಜನೆಯು ಸರ್ಕಾರಿ ಶಾಲಾ ಮಕ್ಕಳ ಹಸಿವು ನೀಗಿಸುವುದರ ಜೊತೆಗೆ ಅವರ ಕಲಿಕಾ ಸಾಮರ್ಥ್ಯ ಹಾಗೂ ಶಾಲಾ ಹಾಜರಾತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಶಾಲೆಯಲ್ಲಿಯೇ ತಯಾರಿಸಿ, ತಾಜಾ ಊಟ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಈ ಉದ್ದೇಶಕ್ಕಾಗಿ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲೆಗಳಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಿ, ಅಗತ್ಯ ಸಾಮಗ್ರಿಗಳನ್ನು ಪೂರೈಸಿದೆ. ಇಂತಹ ಸಂದರ್ಭದಲ್ಲಿ ಸೆಂಟ್ರಲ್ ಕ್ಲಸ್ಟರ್ ಕಿಚನ್ ವ್ಯವಸ್ಥೆ ಆರಂಭಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಸಿಬ್ಬಂದಿಯ ಉದ್ಯೋಗಕ್ಕೆ ಧಕ್ಕೆ ಉಂಟಾಗುವ ಆತಂಕವಿದೆ ಎಂದು ದೂರಿದರು.

ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಶಿಕ್ಷಕರಿಗೆ ವಹಿಸುವ ಬದಲು ಅಡುಗೆ ಸಿಬ್ಬಂದಿಗೆ ನೀಡಬೇಕು. ಅಡುಗೆ ಸಿಬ್ಬಂದಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರ ಜಂಟಿ ಖಾತೆಯ ಮೂಲಕ ಹಣಕಾಸು ವ್ಯವಹಾರ ನಡೆಸಲು ಅವಕಾಶ ಕಲ್ಪಿಸಬೇಕು. ಅಗತ್ಯವಿದ್ದಲ್ಲಿ ಅಡುಗೆ ಸಿಬ್ಬಂದಿಯ ಕೆಲಸದ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಶಾಲೆಗಳಲ್ಲಿ ಈಗಿರುವ ಅಡುಗೆ ಸಿಬ್ಬಂದಿಯೇ ಬಿಸಿಯೂಟ ತಯಾರಿಸುವ ವ್ಯವಸ್ಥೆಯನ್ನು ಮುಂದುವರಿಸಬೇಕು. ಸೆಂಟ್ರಲ್ ಕ್ಲಸ್ಟರ್ ಕಿಚನ್ ಪದ್ಧತಿಯು ಬಿಸಿಯೂಟ ಯೋಜನೆಯಲ್ಲಿ ಖಾಸಗಿ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡುವ ಆತಂಕವಿದ್ದು, ಸರ್ಕಾರ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ, ಸಂಘದ ಅಧ್ಯಕ್ಷೆ ಮರಿಯಮ್ಮ, ಕಾರ್ಯದರ್ಶಿ ಶ್ರೀಲೇಖಾ, ಲಕ್ಷ್ಮಿ, ಮಂಜುಳಾ, ರತ್ನಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.