ಸಿಂಧನೂರು: ಮಸ್ಕಿ ತಾಲೂಕಿನ ಬೆಲ್ಲದಮರಡಿ ಗ್ರಾಮದ 75 ವರ್ಷದ ವೆಂಕಣ್ಣ ಹನುಮಂತ್ರಾಯ ಅಸರಡ್ಡಿ ಅವರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ನಿರ್ವಹಣೆಗಾಗಿ ₹1 ಲಕ್ಷ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀಮಠ ಸೇವಾ ಟ್ರಸ್ಟ್ (ರಿ.) ಹರೇಟನೂರು ಸಂಸ್ಥೆಯ ಕಾರುಣ್ಯಾಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೆಂಕಣ್ಣ ಅವರು ದೇಣಿಗೆ ನೀಡಿದರು. ಇದೇ ಸಂದರ್ಭದಲ್ಲಿ ಬೂದಿವಾಳ ಕ್ಯಾಂಪಿನ ದಿವಂಗತ ಸುಂಕವಲ್ಲಿ ಹಮ್ಮಿರಾಜು ಅವರ ಪತ್ನಿ ಸುಂಕವಲ್ಲಿ ವರಲಕ್ಷ್ಮಿ ಅವರು ಕಾರುಣ್ಯ ದತ್ತಿ ಧರ್ಮದರ್ಶಿಯಾಗಿ ಆಶ್ರಮಕ್ಕೆ ನೆರವು ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಸುವಾರ್ತ ರಮೇಶ ಅವರು ಆಶ್ರಮದ ನಿವಾಸಿಗಳಿಗೆ ಹಣ್ಣುಹಂಪಲು ವಿತರಿಸಿ, ಅವರ ಯೋಗಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯ ಮನುಷ್ಯನನ್ನೇ ತಿರಸ್ಕರಿಸುವ ಇಂದಿನ ಸಮಾಜದಲ್ಲಿ ಕಾರುಣ್ಯಾಶ್ರಮವು ಮಾನವೀಯತೆಯ ಮಂದಿರವಾಗಿ ಕಾರ್ಯನಿರ್ವಹಿಸುತ್ತಿದೆ. ಅನಾಥರು, ವೃದ್ಧರು ಹಾಗೂ ಆಶ್ರಯವಿಲ್ಲದವರಿಗೆ ಆಸರೆಯಾಗಿರುವ ಸಂಸ್ಥೆಯ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಾಮಾನ್ಯ ಅರ್ಚಕರಾಗಿದ್ದ ವೇದಮೂರ್ತಿ ಅಮರಯ್ಯ ಸ್ವಾಮಿಯವರು ಇಂತಹ ಸೇವಾ ಸಂಸ್ಥೆಯನ್ನು ಸ್ಥಾಪಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ. ದಾನಿಗಳ ನೆರವಿನಿಂದ ಆಶ್ರಮವು ಅನೇಕ ನಿರ್ಗತಿಕರಿಗೆ ಬದುಕಿನ ಭರವಸೆ ನೀಡುತ್ತಿದೆ. ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ವೈಯಕ್ತಿಕವಾಗಿ ಹಾಗೂ ಪೊಲೀಸ್ ಇಲಾಖೆಯ ಮೂಲಕ ಸಾಧ್ಯವಾದಷ್ಟು ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಶಾಂಭವಿ ಪುಣ್ಯಾಶ್ರಮದ ವೇದಮೂರ್ತಿ ವೀರೇಶ ಯಡಿಯೂರುಮಠ ಮಾತನಾಡಿ, ಕಾರುಣ್ಯಾಶ್ರಮಕ್ಕೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಂದ ನಿರಂತರ ಸಹಕಾರ ದೊರೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಟೀಕೆ, ಅಪಪ್ರಚಾರ ಹಾಗೂ ಹಲವು ಸವಾಲುಗಳ ನಡುವೆಯೂ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರು ಸೇವಾ ಕಾರ್ಯವನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ. ಇಂತಹ ಸಂಸ್ಥೆಗಳಿಗೆ ನೆರವಾಗುವ ದಾನಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಪಿಎಸ್‌ಐ ಸುವಾರ್ತ ರಮೇಶ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ದಾನಿಗಳಾದ ವೆಂಕಣ್ಣ ಅಸರಡ್ಡಿ ಹಾಗೂ ಸುಂಕವಲ್ಲಿ ವರಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಮಲ್ಲಮ್ಮ ಮಾಡಸಿರವಾರ ಸಾಮಾಜಿಕ ಸಾಂಸ್ಕೃತಿಕ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ನಾರಾಯಣಪ್ಪ ಮಾಡಸಿರವಾರ, ಸೀತಾರಾಮಯ್ಯ ಬೂದಿವಾಳ ಕ್ಯಾಂಪ್, ಶರಣಯ್ಯ ಸ್ವಾಮಿ ಆದಾಪುರ, ಅಮರೇಗೌಡ ಆದಾಪುರ, ಪೊಲೀಸ್ ಸಿಬ್ಬಂದಿ ಜಗದೀಶ, ಪಂಪಾಪತಿ, ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸವ ಸ್ವಾಮಿ ಹಿರೇಮಠ, ಸದಸ್ಯೆ ಸುಜಾತ ಹಿರೇಮಠ, ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ, ಮರಿಯಪ್ಪ, ವಿದ್ಯಾಶ್ರೀ, ಶಂಕ್ರಮ್ಮ, ಶರಣಸ್ವಾಮಿ, ಬಸವಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.