ಕವಿತಾಳ: ಪಾಠವನ್ನು ಸರಿಯಾಗಿ ಓದಲು ಬರುತ್ತಿಲ್ಲ ಎಂಬ ಕಾರಣಕ್ಕೆ 10 ವರ್ಷದ ಬಾಲಕನ ಬಾಯಿಗೆ ಬಟ್ಟೆ ಕಟ್ಟಿ, ಕಟ್ಟಿಗೆಯಿಂದ ತೀವ್ರವಾಗಿ ಥಳಿಸಿ ಗಾಯಗೊಳಿಸಿದ ಆರೋಪದಡಿ ಮದರಸಾ ಶಿಕ್ಷಕನನ್ನು ಕವಿತಾಳ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕವಿತಾಳ ಪಟ್ಟಣದ ಮದರಸಾ ದಾರುಲ್ ಹುಪ್ಪಾಜ್ (ರಿ) ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ಹಲ್ಲೆಗೆ ಒಳಗಾಗಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾಳ ನಿವಾಸಿ ನಜೀಮುದ್ದೀನ್ ಅವರ ಪುತ್ರ ಅಬ್ಬಾಸ ಅಲಿ (26) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೊಲೀಸರಿಗೆ ಸಲ್ಲಿಸಿರುವ ದೂರಿನ ಪ್ರಕಾರ, ನವೆಂಬರ್ 3ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಮದರಸಾದಲ್ಲಿ ಪಾಠ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಲಕನಿಗೆ ಸರಿಯಾಗಿ ಓದಲು ಬರುತ್ತಿಲ್ಲ ಎಂದು ಶಿಕ್ಷಕ ಅಬ್ಬಾಸ ಅಲಿ ಆಕ್ರೋಶಗೊಂಡಿದ್ದಾನೆ ಎನ್ನಲಾಗಿದೆ.

ಬಾಲಕನ ಬಾಯಿಗೆ ಬಟ್ಟೆ ಕಟ್ಟಿ, ಕಟ್ಟಿಗೆಯಿಂದ ಕಣ್ಣು, ಕೆನ್ನೆ, ತಲೆ, ಬೆನ್ನು, ಕೈಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ಬಾಲಕನ ಎರಡೂ ಕಣ್ಣುಗಳ ಸುತ್ತ ರಕ್ತ ಹೆಪ್ಪುಗಟ್ಟಿದ್ದು, ದೃಷ್ಟಿ ಮಂಜಾಗಿರುವುದರ ಜೊತೆಗೆ ತಲೆಗೆ ಒಳಪೆಟ್ಟಾಗಿ ಊತ ಕಾಣಿಸಿಕೊಂಡಿದೆ. ದೇಹದ ಇತರ ಭಾಗಗಳಲ್ಲಿಯೂ ಗಾಯಗಳಾಗಿವೆ ಎಂದು ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಇತರ ಆರೋಪಿತರು ಬಾಲಕನಿಗೆ ಮತ್ತಷ್ಟು ಹೊಡೆದರೆ ಚೆನ್ನಾಗಿ ಓದುತ್ತಾನೆ ಎಂದು ಶಿಕ್ಷಕನನ್ನು ಪ್ರಚೋದಿಸಿದ್ದಾರೆ. ಅಲ್ಲದೆ, ಹಲ್ಲೆ ನಡೆದ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬಾಲಕನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.

ನವೆಂಬರ್ 8ರಂದು ಸಂಜೆ ಬಾಲಕನನ್ನು ಭೇಟಿಯಾಗಲು ಪೋಷಕರು ತಮ್ಮ ಸಂಬಂಧಿಯೊಂದಿಗೆ ಮದರಸಾಕ್ಕೆ ತೆರಳಿದಾಗ ಹಲ್ಲೆ ನಡೆದಿರುವ ವಿಷಯ ತಿಳಿದುಬಂದಿದೆ ಎನ್ನಲಾಗಿದೆ. ಬಾಲಕನ ದೇಹದ ಮೇಲಿನ ಗಾಯಗಳನ್ನು ಗಮನಿಸಿದ ಪೋಷಕರು ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಬಳಿಕ ಗಾಯಗೊಂಡ ಬಾಲಕನನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದ ನಂತರ ಕವಿತಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿ ಶಿಕ್ಷಕ ಅಬ್ಬಾಸ ಅಲಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ನವೆಂಬರ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಾಲಕನ ಮೇಲಿನ ಹಲ್ಲೆ ಹಾಗೂ ಜೀವಬೆದರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ಮುಂದುವರಿದಿದೆ.