ರಾಯಚೂರು: ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಾಗೂ ಬಾಲಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲೇಖಕರನ್ನು ಗುರುತಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಸಿಂಧನೂರಿನ ‘ಚೆಲುವ ಚಿಣ್ಣರು’ ಮಕ್ಕಳ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಜಂಟಿಯಾಗಿ ರಾಜ್ಯಮಟ್ಟದ ‘ಚೆಲುವ ಚಿಣ್ಣರು ಪುಸ್ತಕ ಬಹುಮಾನ’ಕ್ಕೆ ಕೃತಿಗಳನ್ನು ಆಹ್ವಾನಿಸಿವೆ ಎಂದು ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರದೇವರು ಹಿರೇಮಠ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2022ರಿಂದ 2025ರವರೆಗೆ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಮಕ್ಕಳ ಕವನ ಸಂಕಲನ ಹಾಗೂ ಮಕ್ಕಳ ಕಥಾ ಸಂಕಲನ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು. ಆಯ್ಕೆಯಾಗುವ ಕೃತಿಗಳ ಲೇಖಕರಿಗೆ ತಲಾ ₹3 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಪ್ರಶಸ್ತಿಗೆ ಕೃತಿಗಳನ್ನು ಸಲ್ಲಿಸುವ ಲೇಖಕರು ಸಂಬಂಧಪಟ್ಟ ವಿಭಾಗದಲ್ಲಿ ತಮ್ಮ ಪುಸ್ತಕದ ಮೂರು ಪ್ರತಿಗಳನ್ನು ಕಳುಹಿಸಬೇಕು. ಪುಸ್ತಕದ ನೋಂದಣಿ ಪತ್ರದ ನಕಲು ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ನವೆಂಬರ್ 10, 2026 ಕೃತಿಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ನಿಗದಿತ ಅವಧಿಯೊಳಗೆ ತಲುಪುವಂತೆ ಕಳುಹಿಸಬೇಕು. ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಪ್ರಶಸ್ತಿ ಆಯ್ಕೆಯಲ್ಲಿ ತೀರ್ಪುಗಾರರ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಆಸಕ್ತ ಲೇಖಕರು ತಮ್ಮ ಕೃತಿಗಳನ್ನು ಶಂಕರದೇವರು ಹಿರೇಮಠ, ‘ಶ್ರೀ ಶಿವನಿಲಯ’, ಮನೆ ಸಂಖ್ಯೆ 6-1-122, ನಗರಸಭೆ ಹತ್ತಿರ, ಕೋಟೆ, ಸಿಂಧನೂರು–584128, ರಾಯಚೂರು ಜಿಲ್ಲೆ ಎಂಬ ವಿಳಾಸಕ್ಕೆ ಕಳುಹಿಸಬಹುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಗೆ ವೇದಿಕೆ ಕಲ್ಪಿಸಲು ಮಕ್ಕಳ ಸ್ವರಚಿತ ಕವನಗಳ ಪ್ರಾತಿನಿಧಿಕ ಸಂಕಲನ ಹೊರತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಮಕ್ಕಳ ಸಾಹಿತ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಶ್ರೀ ಗುರು ನಮನ’, ‘ಬಾರೋ ಬಾರೋ ಮಳೆರಾಯ’ ಮತ್ತು ‘ಪಾಟಿ ಮೇಲೆ ಪಾಟಿ ನಮ್ ಸಾಲಿ ಸೂಟಿ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಲಾಗಿದೆ. ಈ ಪ್ರಯತ್ನವನ್ನು ಮುಂದುವರಿಸುವ ಉದ್ದೇಶದಿಂದ ಪ್ರಸಕ್ತ ವರ್ಷವೂ ವಿದ್ಯಾರ್ಥಿಗಳಿಂದ ಕವಿತೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ರಚಿಸಿದ ಸ್ವಂತ ಕವಿತೆಗಳನ್ನು ಕಳುಹಿಸಲು ಅವಕಾಶವಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಕವಿತೆಯನ್ನು ಮಾತ್ರ ಸಲ್ಲಿಸಬಹುದಾಗಿದೆ. ಕವಿತೆಯೊಂದಿಗೆ ವಿದ್ಯಾರ್ಥಿಯ ಭಾವಚಿತ್ರ, ಶಾಲೆಯಿಂದ ಪಡೆದ ದೃಢೀಕರಣ ಪತ್ರ, ಕವಿತೆಯ ಪ್ರಕಟಣೆಗೆ ಒಪ್ಪಿಗೆ ಪತ್ರ, ಪೂರ್ಣ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ ಎಂದರು.
ಕವಿತೆಗಳು ಸ್ವಂತ ರಚನೆಯಾಗಿರಬೇಕು. ಯಾವುದೇ ವ್ಯಕ್ತಿ, ಜಾತಿ, ಧರ್ಮ, ಪ್ರದೇಶ ಅಥವಾ ವೃತ್ತಿಯ ಬಗ್ಗೆ ಅವಹೇಳನಕಾರಿ ಅಂಶಗಳನ್ನು ಒಳಗೊಂಡಿರಬಾರದು. ಸಂಕಲನಕ್ಕೆ ಆಯ್ಕೆಯಾಗಿ ಪ್ರಕಟವಾಗುವ ಕವಿತೆಗಳಿಗೆ ಸಂಭಾವನೆ ನೀಡಲಾಗುವುದಿಲ್ಲ. ಆದರೆ ಕವಿತೆ ಪ್ರಕಟಗೊಂಡ ಪ್ರತಿಯೊಬ್ಬ ವಿದ್ಯಾರ್ಥಿಗೂ ಪುಸ್ತಕದ ಗೌರವ ಪ್ರತಿಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಕವನಗಳನ್ನು ಸಹ ಸಿಂಧನೂರಿನ ‘ಶ್ರೀ ಶಿವನಿಲಯ’ ವಿಳಾಸಕ್ಕೆ ಕಳುಹಿಸಬಹುದು. ಪುಸ್ತಕ ಬಹುಮಾನ ಹಾಗೂ ಮಕ್ಕಳ ಕವನ ಸಂಕಲನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ 9686840266 ಅಥವಾ 9886002383 ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಶಂಕರದೇವರು ಹಿರೇಮಠ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನರಸಿಂಹಲು ವಡವಟ್ಟಿ ಹಾಗೂ ಭ್ರಮೆನಂದ್ ರೆಡ್ಡಿ ಉಪಸ್ಥಿತರಿದ್ದರು.



