ರಾಯಚೂರು, ನ. 5: ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಮಕ್ಕಳ ಹಕ್ಕುಗಳು ಹಾಗೂ ಉಜ್ವಲ ಭವಿಷ್ಯವನ್ನು ರಕ್ಷಿಸುವ ಉದ್ದೇಶದಿಂದ ಮಾರ್ಗದರ್ಶಿ ಸೊಸೈಟಿ ವತಿಯಿಂದ ಹಮ್ಮಿಕೊಂಡಿರುವ ‘ಬಾಲ್ಯವಿವಾಹ ಮುಕ್ತ ರಾಯಚೂರು’ 100 ದಿನಗಳ ವಿಶೇಷ ಜಾಗೃತಿ ಅಭಿಯಾನದ ಬ್ಯಾನರ್ ಹಾಗೂ ಪೋಸ್ಟರ್ಗಳನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀಶ್ ಬಾಬು ಬಿಡುಗಡೆ ಮಾಡಿದರು.
ನಗರದ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ನವೆಂಬರ್ 4ರಂದು ಆಯೋಜಿಸಿದ್ದ ಅಪಹರಣಕ್ಕೊಳಗಾದ ಹಾಗೂ ಕಾಣೆಯಾದ ಮಕ್ಕಳ ಪತ್ತೆ ಮತ್ತು ಪಾಲಕರ ಸಭೆಯ ಸಂದರ್ಭದಲ್ಲಿ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀಶ್ ಬಾಬು, ಜಿಲ್ಲೆಯಲ್ಲಿ ಒಂದೇ ಒಂದು ಬಾಲ್ಯವಿವಾಹವೂ ನಡೆಯದಂತೆ ತಡೆಯುವುದು ನಮ್ಮ ಪ್ರಮುಖ ಗುರಿಯಾಗಿದೆ. ಬಾಲ್ಯವಿವಾಹವು ಮಕ್ಕಳ ಬಾಲ್ಯ, ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯವನ್ನು ಕಸಿದುಕೊಳ್ಳುವ ಸಾಮಾಜಿಕ ಅನಿಷ್ಟ ಪದ್ಧತಿಯಾಗಿದೆ. ಇದನ್ನು ನಿರ್ಮೂಲನೆ ಮಾಡಲು ಪೊಲೀಸ್ ಇಲಾಖೆ, ಸಂಬಂಧಪಟ್ಟ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಬಾಲ್ಯವಿವಾಹ ನಿಷೇಧ ಕಾಯ್ದೆಯ ಪ್ರಕಾರ 18 ವರ್ಷ ಪೂರ್ಣಗೊಳಿಸದ ಹೆಣ್ಣುಮಕ್ಕಳು ಹಾಗೂ 21 ವರ್ಷ ಪೂರ್ಣಗೊಳಿಸದ ಗಂಡುಮಕ್ಕಳ ವಿವಾಹವು ಬಾಲ್ಯವಿವಾಹದ ವ್ಯಾಪ್ತಿಗೆ ಒಳಪಡುತ್ತದೆ. ಇಂತಹ ವಿವಾಹಗಳನ್ನು ಏರ್ಪಡಿಸುವುದು, ನೆರವೇರಿಸುವುದು ಹಾಗೂ ಕಾನೂನು ಉಲ್ಲಂಘನೆಯ ಮೂಲಕ ಅದಕ್ಕೆ ಸಹಕರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯವಿವಾಹ ನಡೆಯುತ್ತಿರುವ ಕುರಿತು ಮಾಹಿತಿ ದೊರೆತ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
100 ದಿನಗಳ ಅಭಿಯಾನದ ಅಂಗವಾಗಿ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಗ್ರಾಮಮಟ್ಟದ ಸಭೆಗಳು, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಮನೆಮನೆಗೆ ತೆರಳಿ ಮಾಹಿತಿ ನೀಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳು, ಮಕ್ಕಳ ಶಿಕ್ಷಣದ ಮಹತ್ವ, ಬಾಲ್ಯವಿವಾಹ ನಿಷೇಧ ಕಾಯ್ದೆಯ ನಿಯಮಗಳು ಹಾಗೂ ಕಾನೂನು ಉಲ್ಲಂಘಿಸಿದವರಿಗೆ ವಿಧಿಸಲಾಗುವ ಶಿಕ್ಷೆಗಳ ಕುರಿತು ಪಾಲಕರು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಬಾಲ್ಯವಿವಾಹವನ್ನು ತಡೆಗಟ್ಟುವುದು ಕೇವಲ ಸರ್ಕಾರ ಅಥವಾ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ಬಾಲ್ಯವಿವಾಹ ನಡೆಯುತ್ತಿರುವ ಅಥವಾ ನಡೆಯುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ಮಕ್ಕಳ ಸಹಾಯವಾಣಿ 1098, ತುರ್ತು ಸಹಾಯವಾಣಿ 112 ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಯಚೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುದರ್ಶನ್, ಮಾರ್ಗದರ್ಶಿ ಸೊಸೈಟಿ ನಿರ್ದೇಶಕ ಆನಂದರಾಜ್, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಮರೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಸಾಂಸ್ಥಿಕ ರಕ್ಷಣಾಧಿಕಾರಿ ಕೆರಲಿಂಗಪ್ಪ, ಕಾನೂನು ಪರಿವೀಕ್ಷಣಾಧಿಕಾರಿ ಶಿವರಾಜ್, ಸಮಾಜ ಕಾರ್ಯಕರ್ತ ತಿಕ್ಕಯ್ಯ, ಶ್ರುತಿ ಸಂಸ್ಕೃತಿ ಸಂಸ್ಥೆಯ ಜಿಲ್ಲಾ ಸಂಯೋಜಕ ಅನಿಲ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಮಾರ್ಗದರ್ಶಿ ಸೊಸೈಟಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.



