ರಾಯಚೂರು, ನ. 5: ನಗರದ ಐತಿಹಾಸಿಕ ಮಾವಿನಕೆರೆ ಅಭಿವೃದ್ಧಿ ಹೆಸರಿನಲ್ಲಿ ಕಳೆದ 15 ವರ್ಷಗಳಿಂದ ಕೋಟ್ಯಂತರ ರೂಪಾಯಿ ಅನುದಾನ ಖರ್ಚು ಮಾಡಲಾಗಿದ್ದರೂ ಕೆರೆಯ ಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆಯಾಗಿಲ್ಲ. ಸುಮಾರು ₹100 ಕೋಟಿಗೂ ಅಧಿಕ ಅನುದಾನ ವ್ಯಯಿಸಿರುವುದಾಗಿ ಹೇಳಲಾಗುತ್ತಿದ್ದರೂ ಕೆರೆ ಕೊಳಚೆಗುಂಡಿಯಾಗಿ ಮಾರ್ಪಟ್ಟಿದೆ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಶಂಕೆಯಿದ್ದು, ಅನುದಾನದ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಆಗ್ರಹಿಸಿದರು.

ನಗರದ ಮಾವಿನಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಗುರುವಾರ ಖುದ್ದಾಗಿ ವೀಕ್ಷಿಸಿದ ಅವರು, ಕೆರೆಯ ಒತ್ತುವರಿ, ಕೊಳಚೆ ನೀರಿನ ಸೇರ್ಪಡೆ, ಅಪೂರ್ಣ ಕಾಮಗಾರಿಗಳು ಹಾಗೂ ಅನುದಾನದ ಬಳಕೆಯಲ್ಲಿನ ಪಾರದರ್ಶಕತೆಯ ಕೊರತೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾವಿನಕೆರೆ ಅಭಿವೃದ್ಧಿ ಎಂದರೆ ಕೆರೆಯ ಮೂಲ ಸ್ವರೂಪವನ್ನು ಸಂರಕ್ಷಿಸಿ, ಪರಿಸರ ಸಮತೋಲನ ಕಾಪಾಡುವುದರ ಜೊತೆಗೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿದೆ. ಆದರೆ ಇಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೆರೆಯ ಜಾಗವನ್ನೇ ಒತ್ತುವರಿ ಮಾಡಲಾಗುತ್ತಿದೆ. ಸುಮಾರು 10ರಿಂದ 11 ಎಕರೆ ಕೆರೆ ಜಮೀನು ಒತ್ತುವರಿಯಾಗಿದೆ ಎಂಬ ಆರೋಪಗಳಿದ್ದರೂ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಒತ್ತುವರಿಯಾಗಿರುವ ಜಮೀನುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ನಗರದ ವಿವಿಧ ಬಡಾವಣೆಗಳಿಂದ ಹರಿದುಬರುವ ಚರಂಡಿ ನೀರು, ಒಳಚರಂಡಿ ತ್ಯಾಜ್ಯ ಹಾಗೂ ಮನೆಗಳ ಸ್ನಾನಗೃಹಗಳ ಕೊಳಚೆ ನೀರು ನಿರಂತರವಾಗಿ ಮಾವಿನಕೆರೆಗೆ ಸೇರುತ್ತಿದೆ. ಪರಿಣಾಮವಾಗಿ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ತೀವ್ರವಾಗಿ ಕಲುಷಿತಗೊಂಡಿದೆ. ಇಂತಹ ನೀರನ್ನು ಜಾನುವಾರುಗಳು ಕುಡಿದರೂ ಆರೋಗ್ಯಕ್ಕೆ ಅಪಾಯ ಎದುರಾಗುವ ಆತಂಕವಿದೆ ಎಂದು ಹೇಳಿದರು.

ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮೊದಲು ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಯಬೇಕು. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ಕೆರೆಯ ನೀರಿನ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಇದನ್ನು ಬಿಟ್ಟು ಕೇವಲ ಕಾಮಗಾರಿಗಳ ಹೆಸರಿನಲ್ಲಿ ಅನುದಾನ ಖರ್ಚು ಮಾಡುವುದರಿಂದ ಕೆರೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿದರು.

ಕೆರೆಯ ಕಲುಷಿತ ನೀರು ಸುತ್ತಮುತ್ತಲಿನ ಅಂತರ್ಜಲ ಹಾಗೂ ಕೊಳವೆಬಾವಿಗಳ ನೀರಿನ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ಸಮೀಪದ ಬಡಾವಣೆಗಳ ನಿವಾಸಿಗಳ ಆರೋಗ್ಯಕ್ಕೆ ತೊಂದರೆಯಾಗುವ ಆತಂಕವಿದ್ದು, ಸಂಬಂಧಪಟ್ಟ ಇಲಾಖೆಗಳು ತಕ್ಷಣ ನೀರಿನ ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ಪರೀಕ್ಷೆ ನಡೆಸಬೇಕು. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾವಿನಕೆರೆಯ ಮಧ್ಯಭಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಒತ್ತುವರಿಯಾಗಿರುವ ಜಮೀನುಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಕೆರೆಯ ಸಂರಕ್ಷಣೆಗೆ ಆದ್ಯತೆ ನೀಡಬೇಕಾದ ಅಧಿಕಾರಿಗಳು ಒತ್ತುವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ 15 ವರ್ಷಗಳಿಂದ ಮಾವಿನಕೆರೆ ಅಭಿವೃದ್ಧಿಗಾಗಿ ನಿರಂತರವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಇಂದಿಗೂ ಸಾರ್ವಜನಿಕರು ಕೆರೆಯ ಸುತ್ತಮುತ್ತ ಕುಳಿತುಕೊಳ್ಳಲು ಸಮರ್ಪಕ ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿಲ್ಲ. ಕೆರೆಯ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಅಮೃತ್ ಯೋಜನೆ, ಕೆರೆ ಅಭಿವೃದ್ಧಿ ಯೋಜನೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಮಾವಿನಕೆರೆ ಅಭಿವೃದ್ಧಿಗೆ ಅನುದಾನ ಬಳಕೆಯಾಗಿರುವುದಾಗಿ ಹೇಳಲಾಗುತ್ತಿದೆ. ಆದರೆ ಯಾವ ಇಲಾಖೆಯಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ, ಯಾವ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಎಷ್ಟು ಹಣ ಖರ್ಚು ಮಾಡಲಾಗಿದೆ ಹಾಗೂ ಕಾಮಗಾರಿಗಳ ಪ್ರಗತಿ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುತ್ತಿಲ್ಲ ಎಂದು ದೂರಿದರು.

ಮಾಹಿತಿ ಹಕ್ಕು ಕಾಯ್ದೆಯಡಿ ಹಲವು ಬಾರಿ ಮಾಹಿತಿ ಕೋರಿದರೂ ಸಮರ್ಪಕ ದಾಖಲೆಗಳನ್ನು ಒದಗಿಸಿಲ್ಲ. ಸಾರ್ವಜನಿಕರ ತೆರಿಗೆ ಹಣದಿಂದ ಕೈಗೊಳ್ಳುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಯಲ್ಲೂ ಪಾರದರ್ಶಕತೆ ಇರಬೇಕು. ಕಾಮಗಾರಿಯ ಹೆಸರು, ಯೋಜನೆಯ ವಿವರ, ಅನುದಾನದ ಮೂಲ, ಅಂದಾಜು ವೆಚ್ಚ, ಗುತ್ತಿಗೆದಾರರ ಮಾಹಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನೊಳಗೊಂಡ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಆದರೆ ಮಾವಿನಕೆರೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದರೂ ಮಾಹಿತಿ ಫಲಕಗಳೇ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಹಿತಾಸಕ್ತಿಗಿಂತ ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ಸಮಸ್ಯೆಗಳನ್ನು ಬಗೆಹರಿಸುವುದು ಅವರ ಪ್ರಮುಖ ಕರ್ತವ್ಯವಾಗಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಇಲ್ಲದಿದ್ದರೆ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಕಾನೂನು ಹೋರಾಟ ನಡೆಸಲು ಸಿದ್ಧರಿದ್ದೇವೆ. ಶಾಸಕಾಂಗದಿಂದ ಬಿಡುಗಡೆಯಾಗುವ ಅನುದಾನವನ್ನು ಕಾರ್ಯಾಂಗ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯದಿದ್ದರೆ ನ್ಯಾಯಾಂಗದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಮಾವಿನಕೆರೆ ಅಭಿವೃದ್ಧಿಗೆ ಇದುವರೆಗೆ ಬಿಡುಗಡೆಯಾದ ಒಟ್ಟು ಅನುದಾನ, ವೆಚ್ಚದ ವಿವರ ಹಾಗೂ ಪೂರ್ಣಗೊಂಡ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಕೆರೆಯ ಒತ್ತುವರಿ ತೆರವುಗೊಳಿಸಿ, ಕೊಳಚೆ ನೀರಿನ ಸೇರ್ಪಡೆಯನ್ನು ತಡೆಯಬೇಕು. ನೀರಿನ ಶುದ್ಧೀಕರಣ, ಕೆರೆಯ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಅಧಿಕಾರಿಗಳು ತಕ್ಷಣ ಸ್ಪಂದಿಸದಿದ್ದರೆ ಸಾರ್ವಜನಿಕರ ಹಿತಾಸಕ್ತಿಗಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ರಾಮನಗೌಡ ಏಗನೂರು ಎಚ್ಚರಿಕೆ ನೀಡಿದರು.