ರಾಯಚೂರು, ನ. 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಹಾಗೂ ಹೈಕು ಕವಿ ವೀರ ಹನುಮಾನ್ ಅವರನ್ನು ನಗರದ ಕನ್ನಡ ಭವನದಲ್ಲಿ ಬುಧವಾರ ಸಂಜೆ ಸಾಹಿತಿಗಳು, ಶಿಕ್ಷಕರು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಸಾಹಿತ್ಯಾಸಕ್ತರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮೂಕಪ್ಪ ಕಟ್ಟಿಮನಿ, ಹೈಕು ಸಾಹಿತ್ಯ ಕ್ಷೇತ್ರದಲ್ಲಿ ವೀರ ಹನುಮಾನ್ ಅವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಸೃಜನಶೀಲ ಕವಿಯಾಗಿದ್ದಾರೆ. ಅಲ್ಪ ಪದಗಳಲ್ಲಿ ಅಗಾಧವಾದ ಜೀವನಾನುಭವ, ಸಾಮಾಜಿಕ ಪ್ರಜ್ಞೆ ಹಾಗೂ ಪ್ರಕೃತಿಯ ಸೂಕ್ಷ್ಮ ಸೌಂದರ್ಯವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅವರ ಹೈಕು ಕವಿತೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶೇಷ ಗಮನ ಸೆಳೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೀರ ಹನುಮಾನ್ ಅವರು ಸಾಹಿತ್ಯ ರಚನೆಗೆ ಮಾತ್ರ ಸೀಮಿತವಾಗದೆ ಸಾಹಿತ್ಯ ಸಂಘಟನೆ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೂ ನಿರಂತರವಾಗಿ ಶ್ರಮಿಸಿದ್ದಾರೆ. ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವುದರ ಜೊತೆಗೆ ಹೊಸ ತಲೆಮಾರಿನ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ. ಇಂತಹ ಹಿರಿಯ ಸಾಹಿತ್ಯ ಸಾಧಕರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ರಾಯಚೂರು ಜಿಲ್ಲೆಯ ಸಾಹಿತ್ಯ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿನಂದಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ವೀರಭದ್ರಪ್ಪ ಮಾತನಾಡಿ, ವೀರ ಹನುಮಾನ್ ಅವರು ಕೇವಲ ಕವಿಯಾಗಿ ಗುರುತಿಸಿಕೊಂಡವರಲ್ಲ. ಸಾಹಿತ್ಯವನ್ನು ಜನಸಾಮಾನ್ಯರ ನಡುವೆ ಕೊಂಡೊಯ್ಯುವ ಉದ್ದೇಶದಿಂದ ನಿರಂತರವಾಗಿ ಶ್ರಮಿಸಿದ ಕ್ರಿಯಾಶೀಲ ಸಾಹಿತ್ಯ ಸಂಘಟಕರೂ ಆಗಿದ್ದಾರೆ. ತಮ್ಮ ಸುದೀರ್ಘ ಸಾಹಿತ್ಯ ಸೇವೆ, ಹೈಕು ಕಾವ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಹಾಗೂ ವಿವಿಧ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೋರಿರುವ ಬದ್ಧತೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸಾಹಿತ್ಯವು ಸಮಾಜದ ಬದುಕು, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಮುಖ ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ವೀರ ಹನುಮಾನ್ ಅವರ ಸಾಹಿತ್ಯ ಸಾಧನೆ ಮಹತ್ವದ್ದಾಗಿದೆ. ಅವರ ನಿರಂತರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿಯೂ ಅವರಿಂದ ಇನ್ನಷ್ಟು ಮೌಲ್ಯಯುತ ಸಾಹಿತ್ಯ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವೀರ ಹನುಮಾನ್ ಅವರಿಗೆ ಸನ್ಮಾನ ಸಲ್ಲಿಸಿದ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು, ಅವರ ಸಾಹಿತ್ಯ ಸಾಧನೆ, ಕನ್ನಡಪರ ಕಾಳಜಿ ಮತ್ತು ಸಂಘಟನಾ ಕಾರ್ಯಗಳನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿ. ಚನ್ನಬಸವಗೌಡ, ನಿವೃತ್ತ ಮುಖ್ಯ ಶಿಕ್ಷಕರಾದ ನಂದೀಶ್, ಹನುಮಂತಪ್ಪ, ನಿವೃತ್ತ ಶಿಕ್ಷಕರಾದ ಕೃಷ್ಣಪ್ಪ, ಬಹುಜನ ಚಿಂತಕ ಎಂ.ಆರ್. ಭೇರಿ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಕುರುಡಿ, ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಜಿಂದಪ್ಪ, ಪತ್ರಕರ್ತ ಪರಮೇಶ್ವರ ಮಾನ್ವಿ, ಸಾಹಿತಿ ತಾಯಪ್ಪ ಮರ್ಚಟ್ಹಾಳ್, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಯಂಕಪ್ಪ ಪಿರಂಗಿ, ಶಾಂತಕುಮಾರ, ಮುಖ್ಯ ಶಿಕ್ಷಕ ಈರಪ್ಪ ಕೊಂಬಿನ, ಕವಿ ಮಹಾಂತೇಶ ಬಿರಾದಾರ, ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ಕಾರ್ಯದರ್ಶಿ ಸಂತೋಷ ನಂದಿನಿ, ಸಮಿತಿಯ ಮಾಜಿ ತಾಲೂಕು ಅಧ್ಯಕ್ಷ ರಾಘವೇಂದ್ರ, ಶಿಕ್ಷಕ ವಸಂತಕುಮಾರ, ಕೆಎಸ್ಆರ್ಟಿಸಿಯ ಮುದ್ದುಕೃಷ್ಣ, ನಿವೃತ್ತ ಶಿಕ್ಷಕರಾದ ಸಾಬಣ್ಣ, ವೆಂಕಟೇಶ್, ನರಸಿಂಹಲು, ಕವಿ ಮಲ್ಲೇಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಧಾಕರ್, ಗಜಲ್ ಕವಿ ಕೊರೇನಲ್, ನಾಗರಾಜ್ ಜಾಲಿಬೆಂಚಿ, ಪತ್ರಕರ್ತ ರಂಗಸ್ವಾಮಿ, ಚಿನ್ನಬಾಬು ಸೇರಿದಂತೆ ಅನೇಕ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಸ್ನೇಹಿತರು ಉಪಸ್ಥಿತರಿದ್ದು, ವೀರ ಹನುಮಾನ್ ಅವರಿಗೆ ಅಭಿನಂದನೆ ಸಲ್ಲಿಸಿದರು.



