ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠ ಕಲ್ಮಠದ 51ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಅ.11ರಿಂದ 23ರವರೆಗೆ ಶ್ರೀಮಠದ ಆವರಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಅ.11ರಂದು ಬೆಳಿಗ್ಗೆ 11 ಗಂಟೆಗೆ ಶ್ರೀದೇವಿಯ ರಜತ ಮೂರ್ತಿ ಪ್ರತಿಷ್ಠಾಪನೆ ಹಾಗೂ 108 ಬಾಲ ಮುತ್ತೈದೆಯರ ಪಾದಪೂಜೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಪ್ರತಿದಿನ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಇಲಕಲ್ ಗುಡೂರು ಹಿರೇಮಠದ ಶ್ರೀ ಅನ್ನದಾನ ಸ್ವಾಮಿಗಳಿಂದ ಶ್ರೀದೇವಿ ಪುರಾಣ ಪ್ರವಚನ ನಡೆಯಲಿದೆ.
ಅ.20ರಂದು ಸರ್ವಧರ್ಮ ಸಮ್ಮೇಳನ ಆಯೋಜಿಸಲಾಗಿದ್ದು, ವಿವಿಧ ಧರ್ಮಗಳ ಗಣ್ಯರು ಭಾಗವಹಿಸಲಿದ್ದಾರೆ. ಅ.21ರಂದು ವಿಜಯದಶಮಿ ಆಚರಣೆ ಹಾಗೂ ಗುರುಗಳಿಗೆ ಭಕ್ತರಿಂದ ಬನ್ನಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
ಅ.22ರಂದು ಶ್ರೀದೇವಿ ಪುರಾಣ ಪ್ರವಚನದ ಮಹಾಮಂಗಲ ನಡೆಯಲಿದ್ದು, 1001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಲಿಂ. ಭೀಮಪ್ಪ ಬಂಗಾರಿ ಅವರ ಸ್ಮರಣಾರ್ಥ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಉತ್ತಮ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅ.23ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಸುಮಂಗಲಿಯರು ಕಳಸ-ಕುಂಭಗಳೊಂದಿಗೆ ಮಹಾಲಕ್ಷ್ಮೀ ದೇವಸ್ಥಾನದವರೆಗೆ ತೆರಳಿ ಗಂಗೆ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಪವಿತ್ರ ಗಂಗೆಯನ್ನು ತಂದು ಚೌಡೇಶ್ವರಿ ದೇವಿಗೆ ಅಭಿಷೇಕ ನೆರವೇರಿಸಲಾಗುವುದು.
ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳು ಹಾಗೂ ವಾದ್ಯಮೇಳಗಳೊಂದಿಗೆ ಶ್ರೀ ಭುವನೇಶ್ವರಿಯ ರಜತ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಬಿಚ್ಚಾಲಿ ಸಂಸ್ಥಾನ ಮಠದ ಗಜಲಕ್ಷ್ಮೀ ಮೇಲೆ ಶ್ರೀ ಜಗನ್ಮಾತೆಯ ಮೂರ್ತಿಯ ಮೆರವಣಿಗೆಯೂ ನಡೆಯಲಿದೆ. ರೈತರ ಬಂಡಿಗಳಲ್ಲಿ ವಿವಿಧ ಧರ್ಮಗಳ ಮಹನೀಯರನ್ನು ಪರಿಚಯಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಲಿವೆ. ವಿವಿಧ ಮಠಗಳ ಶ್ರೀಗಳು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ 1 ಗಂಟೆಗೆ ಶ್ರೀಮಠದಲ್ಲಿ ಮಹಾಗಣಾರಾಧನೆ ನಡೆಯಲಿದ್ದು, ಭಕ್ತರು, ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕೋರಿದ್ದಾರೆ.



