ಮಾನ್ವಿ: ರಾಯಚೂರು ನಗರದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಆರ್ಯ ವೈಶ್ಯ ಸಮುದಾಯದ ಸಣ್ಣ ವ್ಯಾಪಾರಿ ಬಾಪೂರು ನರಸಿಂಹ ಶ್ರೇಷ್ಠಿ ಅವರ ಸಾವಿಗೆ ಸಂತಾಪ ಸೂಚಿಸಿ, ಶ್ರೀ ನಗರೇಶ್ವರ ಆರ್ಯ ವೈಶ್ಯ ಸಂಘದ ವತಿಯಿಂದ ಪಟ್ಟಣದ ಬಸವ ವೃತ್ತದಲ್ಲಿ ಮೇಣದಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಗರೇಶ್ವರ ಆರ್ಯ ವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ, ರಾಯಚೂರು ನಗರದಲ್ಲಿ ಹಾಡಹಗಲೇ ಸಣ್ಣ ವ್ಯಾಪಾರಿಯೊಬ್ಬರ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯವಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದಿರುವ ಈ ಘಟನೆಯು ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಉದ್ರಿ ನೀಡಲು ನಿರಾಕರಿಸಿದ ಕಾರಣಕ್ಕೆ ಮಾದಕ ವಸ್ತು ಸೇವಿಸಿದ್ದ ಎನ್ನಲಾದ ವ್ಯಕ್ತಿಯೊಬ್ಬ ಬಾಪೂರು ನರಸಿಂಹ ಶ್ರೇಷ್ಠಿ ಅವರನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಕರಣದ ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಹಾವಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಬೇಕು. ವ್ಯಾಪಾರಿಗಳು ನಿರ್ಭಯವಾಗಿ ತಮ್ಮ ವಹಿವಾಟು ನಡೆಸುವಂತಹ ಸುರಕ್ಷಿತ ವಾತಾವರಣ ನಿರ್ಮಿಸಬೇಕು. ಮೃತ ನರಸಿಂಹ ಶ್ರೇಷ್ಠಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದರ ಜೊತೆಗೆ ಅಗತ್ಯ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜದ ಮುಖಂಡರು ಹಾಗೂ ಸದಸ್ಯರು ಮೃತ ಬಾಪೂರು ನರಸಿಂಹ ಶ್ರೇಷ್ಠಿ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಹತ್ಯೆ ಘಟನೆಯನ್ನು ಖಂಡಿಸಿ ಆರ್ಯ ವೈಶ್ಯ ಸಮುದಾಯದ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಬಸವ ವೃತ್ತದಲ್ಲಿ ಮೇಣದಬತ್ತಿಗಳನ್ನು ಬೆಳಗಿಸಿ ಮೃತ ವ್ಯಾಪಾರಿಗೆ ಗೌರವ ನಮನ ಸಲ್ಲಿಸಿದರು.



