ಮಾನ್ವಿ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸವ ವೃತ್ತದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶೀಲ್ ಜಿ. ನಮೋಶಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಅವರು ಜಯಗಳಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು, ಪರಸ್ಪರ ಅಭಿನಂದನೆ ಸಲ್ಲಿಸಿ ವಿಜಯೋತ್ಸವದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಡಾ. ಈರಣ್ಣ ಮರ್ಲಟ್ಟಿ ಹಾಗೂ ನಗರ ಘಟಕದ ಅಧ್ಯಕ್ಷ ಎಚ್. ಮೌನೇಶ್ ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ದೊರೆತ ಗೆಲುವು ಮೈತ್ರಿಕೂಟದ ಸಂಘಟನಾ ಶಕ್ತಿಗೆ ಮತ್ತಷ್ಟು ಬಲ ನೀಡಿದೆ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟರು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳು ಶ್ರಮಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯೋತ್ಸವದಲ್ಲಿ ಜೆಡಿಎಸ್ ಮುಖಂಡರಾದ ಪಿ. ರವಿಕುಮಾರ್, ಭಾಷಾ ಸಾಬ್, ಮೌಲಾಸಾಬ್, ಮಿರ್ಜಾ ಸುಭಾನ್ ಬೇಗ್, ಬಸವರಾಜ್ ಸ್ವಾಮಿ, ಸಾಜೀದ್ ಪಾಷಾ, ಅಮರೇಗೌಡ ಖರಾಬದಿನ್ನಿ, ವಿಜಯ ನಾಯಕ ಕೊಟ್ನೆಕಲ್, ಮೌನೇಶ ನಾಯಕ ಮ್ಯಾಕಲ್, ಸಂತೋಷ ಹೂಗಾರ, ಶಿವಕುಮಾರ್ ಚಲ್ಮಲ್, ವೆಂಕಟೇಶ ನಾಯಕ ಕರಡಿಗುಡ್ಡ, ನಾಗರಾಜ ಪೆರಕಲ್, ಮಲ್ಲನಗೌಡ, ಹೊಯ್ಸಳ ಸ್ವಾಮಿ, ನಾರಾಯಣ ಗಣದಿನ್ನಿ, ನರಸಪ್ಪ ರಬ್ಬಣಕಲ್, ಶಿವು ಸಂಗಾಪೂರ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.