ರಾಯಚೂರು, ಅ.10: ನಗರದ ಉಪ್ಪಾರವಾಡಿ ಬ್ರೇಸ್ತವಾರಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ 55ನೇ ವರ್ಷದ ನವರಾತ್ರಿ ಉತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ವಾಹನೋತ್ಸವಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ದೇವಸ್ಥಾನದ ಪೂಜಾರಿ ಕಂಠಾಚಾರಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಹತ್ತು ದಿನಗಳ ಕಾಲ ಪ್ರತಿದಿನ ದೇವರಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ವಿವಿಧ ವಾಹನೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅ.11ರಂದು ಸೂರ್ಯ ವಾಹನ, ಅ.12ರಂದು ಆದಿಶೇಷ ವಾಹನ, ಅ.13ರಂದು ಸಿಂಹ ವಾಹನ, ಅ.14ರಂದು ಚಂದ್ರ ವಾಹನ, ಅ.15ರಂದು ಕಾಮಧೇನು ಕಲ್ಪವೃಕ್ಷ ವಾಹನ, ಅ.16ರಂದು ಗರುಡ ವಾಹನ, ಅ.17ರಂದು ಆಂಜನೇಯ ವಾಹನ, ಅ.18ರಂದು ಗಜ ವಾಹನ ಹಾಗೂ ಅ.19ರಂದು ಅಶ್ವ ವಾಹನೋತ್ಸವ ನಡೆಯಲಿದೆ ಎಂದು ವಿವರಿಸಿದರು.

ಅಕ್ಟೋಬರ್ 15ರಂದು ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6 ಗಂಟೆಗೆ ದೀಪೋತ್ಸವ ಆಯೋಜಿಸಲಾಗಿದೆ. ಅ.18ರಂದು ಸಂಜೆ 6 ಗಂಟೆಗೆ ಉಯ್ಯಾಲೆ ಉತ್ಸವ ಹಾಗೂ ಅ.19ರಂದು ಸಂಜೆ 6 ಗಂಟೆಗೆ ರಥೋತ್ಸವ ಜರುಗಲಿದೆ. ಅ.20ರಂದು ಶ್ರೀನಿವಾಸ ಕಲ್ಯಾಣೋತ್ಸವದೊಂದಿಗೆ ನವರಾತ್ರಿ ಉತ್ಸವ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ವಿಶೇಷವಾಗಿ, ಅಶ್ವ ಸಪ್ತಮಿ ರಥ ಮಹೋತ್ಸವದ ಪ್ರಯುಕ್ತ ಭಕ್ತರಿಗೆ ವಿಶೇಷ ಸೇವಾ ಅವಕಾಶ ಕಲ್ಪಿಸಲಾಗಿದೆ. ಭಜೆಯ 1008 ಕಮಲ ಹೂವುಗಳಿಂದ ಮಹಾರ್ಚನೆ ಹಾಗೂ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಕ್ಟೋಬರ್ 11ರಿಂದ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು, ಒಂದು ದಿನದ ಪೂಜಾ ಸೇವೆಗೆ ₹2,100 ನಿಗದಿಪಡಿಸಲಾಗಿದೆ. ಭಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡು ಈ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಉತ್ಸವದ ಅಂಗವಾಗಿ ಭಕ್ತರಿಗೆ ವಿವಿಧ ವಿಶೇಷ ಪೂಜಾ ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿ ನಿತ್ಯ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್. ಚಂದ್ರಶೇಖರ, ಜೂಕುರ್ ಶ್ರೀನಿವಾಸ್, ಕೆ. ಆಂಜನೇಯ್ಯ, ಬಿ. ವೆಂಕೋಬ, ಬಿ. ನಾಗರಾಜ, ವೈ. ವೆಂಕೋಬ, ಬೋಲಾಬಂಡಿ ಶ್ರೀನಿವಾಸ್, ಕೆ. ಚಿದಾನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.