ರಾಯಚೂರು, ಅ.10: ನಗರದ ಸರಾಫ್ ಮರ್ಚೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸ್ವರ್ಣ ಮಹಲ್‌ನಲ್ಲಿ ಶ್ರೀಮಾತಾ ತಾಯಮ್ಮ ದೇವಿಯ ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವವನ್ನು ಅಕ್ಟೋಬರ್ 11ರಿಂದ 21ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಗದ್ವಾಲ ನರಸಣ್ಣ ಹಾಗೂ ಕಾರ್ಯದರ್ಶಿ ಕೂರಾ ಅಶೋಕ ತಿಳಿಸಿದ್ದಾರೆ.

ಕಳೆದ 18 ವರ್ಷಗಳಿಂದ ಸಂಘದ ವತಿಯಿಂದ ತಾಯಮ್ಮ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 2025ರಲ್ಲಿ ನೂತನ ಶಿಲಾ ಮಂಟಪ ನಿರ್ಮಿಸಿ ದೇವಿಯ ಮೂರ್ತಿಯನ್ನು ಅದ್ಧೂರಿಯಾಗಿ ಪುನಃ ಪ್ರತಿಷ್ಠಾಪಿಸಲಾಗಿತ್ತು. ಈ ವರ್ಷವೂ ಲೋಕಕಲ್ಯಾಣ, ಭಕ್ತರ ಸುಖಶಾಂತಿ, ಸಮೃದ್ಧಿ ಹಾಗೂ ಸರ್ವರ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 11ರಿಂದ 21ರವರೆಗೆ ಪ್ರತಿದಿನ ಬೆಳಿಗ್ಗೆ 7.30ಕ್ಕೆ ಸ್ವರ್ಣ ಮಹಲ್‌ನಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ಪೂಜಾ ಕಾರ್ಯಕ್ರಮಗಳ ಅಂಗವಾಗಿ ಭಕ್ತರಿಗೆ ಮಹಾಪ್ರಸಾದ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿದೆ.

ಅದೇ ರೀತಿ ಪ್ರತಿದಿನ ಸಂಜೆ 5 ಗಂಟೆಯಿಂದ ಶ್ರೀಮಾತಾ ಅಪ್ಪಾಜಿ ಮಹಿಳಾ ಮಂಡಳಿಯ ವತಿಯಿಂದ ಶ್ರೀ ಲಲಿತಾ ಸಹಸ್ರನಾಮಾವಳಿ ಹಾಗೂ ಶ್ರೀದೇವಿ ಕವಚ ಪಾರಾಯಣ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರ ಒಳಿತಿಗಾಗಿ ಪ್ರಾರ್ಥನೆ ನಡೆಸಲಾಗುವುದು.

ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಮತ್ತು ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ತಾಯಮ್ಮ ದೇವಿಯ ದರ್ಶನ ಪಡೆದು, ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸರಾಫ್ ಮರ್ಚೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗದ್ವಾಲ ನರಸಣ್ಣ, ಕಾರ್ಯದರ್ಶಿ ಕೂರಾ ಅಶೋಕ ಹಾಗೂ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.