ಸಿರವಾರ: ಸಮೀಪದ ನೀಲೋಗಲ್ ಗ್ರಾಮದ ಶ್ರೀ ಶಾಂಭವಿ ಬೃಹನ್ಮಠದಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ ದಸರಾ ಮಹೋತ್ಸವವು ಡಾ. ಪಂಚಾಕ್ಷರಿ ಶಿವಾಚಾರ್ಯರ ಭವ್ಯ ಸಾರೋಟ ಮೆರವಣಿಗೆ ಹಾಗೂ ಶ್ರೀ ಶಾಂಭವಿ ದೇವಿಯ ವಿಶೇಷ ಪೂಜೆಯೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.

ನಾಡಹಬ್ಬ ದಸರಾ ಪ್ರಯುಕ್ತ ಶ್ರೀಮಠದಲ್ಲಿ 11 ದಿನಗಳ ಕಾಲ ಶ್ರೀ ಶಾಂಭವಿ ದೇವಿಗೆ ವಿಶೇಷ ಪೂಜೆ, ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ದಸರಾ ಹಬ್ಬದ ಮರುದಿನವಾದ ಗುರುವಾರ ನೀಲೋಗಲ್ ಗ್ರಾಮದ ಹಳೆಯ ಮಠದಿಂದ ಗ್ರಾಮದ ಹೊರವಲಯದಲ್ಲಿರುವ ನೂತನ ಮಠದವರೆಗೆ ಡಾ. ಪಂಚಾಕ್ಷರಿ ಶಿವಾಚಾರ್ಯರನ್ನು ಅಲಂಕೃತ ಸಾರೋಟದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಮೆರವಣಿಗೆಯಲ್ಲಿ ಭಕ್ತರು ಕುಂಭ, ಕಳಸಗಳನ್ನು ಹೊತ್ತು ಸಾಗಿದರು. ಮಂಗಳವಾದ್ಯಗಳ ನಾದ, ನಂದಿಕೋಲು ಕುಣಿತ ಹಾಗೂ ಸಾಂಪ್ರದಾಯಿಕ ಒಡಪು ಹಾಡುಗಳೊಂದಿಗೆ ನಡೆದ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.

ಮೆರವಣಿಗೆ ನೂತನ ಮಠ ತಲುಪಿದ ಬಳಿಕ ಶ್ರೀ ಶಾಂಭವಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದರೊಂದಿಗೆ 11 ದಿನಗಳ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ತೆರೆ ಎಳೆಯಲಾಯಿತು. ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳಾದ ಬಾಲಯೋಗಿ ರೇಣುಕ ಶಾಂತಮಲ್ಲ ಶಿವಾಚಾರ್ಯರು, ಶ್ರೀಮಠದ ಕಾರ್ಯದರ್ಶಿ ಶಾಂತಕುಮಾರ ಮಠದ ಸೇರಿದಂತೆ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.