ಜಾಲಹಳ್ಳಿ: ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಗುಡ್ಡ ಗ್ರಾಮದ ಸೀಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ, ಸುಮಾರು ₹11.94 ಲಕ್ಷ ಮೌಲ್ಯದ 51 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಹರೀಶ್ ಹಾಗೂ ಲಿಂಗಸುಗೂರು ಪೊಲೀಸ್ ಉಪಾಧೀಕ್ಷಕ ಸುಲೇಮಾನ ತಹಸೀಲ್ದಾರ್ ಅವರ ಮಾರ್ಗದರ್ಶನದಲ್ಲಿ ದೇವದುರ್ಗ ಗ್ರಾಮೀಣ ವೃತ್ತದ ಸಿಪಿಐ ಪುಂಡಲೀಕ ಎಂ. ಪಟಾತರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ.
ದೇವರಗುಡ್ಡ ಗ್ರಾಮದ ಸೀಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಈ ವೇಳೆ ಬೆಳೆದಿದ್ದ 51 ಗಾಂಜಾ ಗಿಡಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಜಪ್ತಿ ಮಾಡಲಾದ ಹಸಿ ಗಾಂಜಾದ ಒಟ್ಟು ತೂಕ 23 ಕೆ.ಜಿ. 890 ಗ್ರಾಂ ಆಗಿದ್ದು, ಅದರ ಅಂದಾಜು ಮೌಲ್ಯ ₹11,94,500 ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಕಲ್ ಗ್ರಾಮದ ನಿವಾಸಿ ಸಾಬಣ್ಣ (45), ತಂದೆ ಮಹಾದೇವಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ದೇವದುರ್ಗ ಗ್ರಾಮೀಣ ವೃತ್ತದ ಸಿಪಿಐ ಪುಂಡಲೀಕ ಎಂ. ಪಟಾತರ, ಎಎಸ್ಐ ಸೈಯದ್ ಚಾಂದ್ ಪಾಶಾ, ಮುಖ್ಯಪೇದೆ ನರಸಪ್ಪ ಹಾಗೂ ಪೊಲೀಸ್ ಸಿಬ್ಬಂದಿಯಾದ ಪ್ರಕಾಶ, ಉಮೇಶ, ಮುರಿಗೆಪ್ಪ, ಸಂತೋಷ, ರಂಗಪ್ಪ, ಶ್ರೀಶೈಲ, ಅಯ್ಯಪ್ಪ, ಅಕ್ಕಮ್ಮ ಮತ್ತು ಗುರುರಾಜ ಭಾಗವಹಿಸಿದ್ದರು.
ಅಕ್ರಮ ಮಾದಕ ವಸ್ತುಗಳ ಬೆಳೆ ಹಾಗೂ ಮಾರಾಟ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆಯ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.



