ದೇವದುರ್ಗ, ಅ.28: ಪಟ್ಟಣದ ಗೌತಮ ಓಣಿಯಲ್ಲಿರುವ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಶೀಗಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ ಹಾಗೂ ಅನ್ನದಾಸೋಹ ಕಾರ್ಯಕ್ರಮವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಹಮ್ಮಿಕೊಳ್ಳಲಾಯಿತು.

ಬಾವಸಾರ ಕ್ಷತ್ರಿಯ ಸಮಾಜದ ಬಾಂಧವರು ಹಾಗೂ ಗೆಳೆಯರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.

ಪ್ರಸಕ್ತ ಬರಗಾಲದ ಪರಿಸ್ಥಿತಿಯಿಂದ ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟಗಳು ದೂರವಾಗಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಲಿ, ಜನಜೀವನ ಸುಭಿಕ್ಷವಾಗಿರಲಿ ಎಂದು ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಧಾರ್ಮಿಕ ಆಚರಣೆಗಳೊಂದಿಗೆ ಸಮಾಜದಲ್ಲಿ ಒಗ್ಗಟ್ಟು, ಸಹಬಾಳ್ವೆ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಬಾವಸಾರ ಕ್ಷತ್ರಿಯ ಸಮಾಜ ಮತ್ತು ಗೆಳೆಯರ ಬಳಗದ ವತಿಯಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಹಾಗೂ ಸಾರ್ವಜನಿಕರು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕ್ಷತ್ರಿಯ ಸಮಾಜದ ಶ್ರೀನಿವಾಸ ಉಭಾಳೆ, ಮೌನೇಶ ಉಭಾಳೆ, ಶಶಿಭೂಷಣಸ್ವಾಮಿ ಗಂಧದಮಠ, ಗುರುಪಾದಯ್ಯಸ್ವಾಮಿ ಹಿರೇಮಠ, ಶಂಕರರಾವ್ ಉಭಾಳೆ, ಮಾಧವರಾವ್ ಉಭಾಳೆ, ಕೇಶವರಾವ್ ಉಭಾಳೆ, ರವಿಕುಮಾರ ಸಾಹು ಕೋರಿ, ಶಂಭುಗೌಡ ಅರಷಣಗಿ, ರಾಜಕುಮಾರ ಸಾಹು ಕೋರಿ, ರವಿಕುಮಾರ್ ಪಾಟೀಲ ಅಳ್ಳುಂಡಿ, ಶಿವಕುಮಾರ ಸ್ವಾಮಿ ಕರ್ನಾಳ, ವೆಂಕನಗೌಡ ಕಕ್ಕಲದೊಡ್ಡಿ, ನವೀನ ಎಲೆಕ್ಟ್ರಿಕಲ್, ಲಕ್ಷ್ಮಣ ಜ್ಯೋತಿ, ದತ್ತುರಾವ್, ವಿರುಪಾಕ್ಷಿ ಸಾಹು ಸೇರಿದಂತೆ ಸಮಾಜದ ಮುಖಂಡರು, ಗೆಳೆಯರ ಬಳಗದ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.