ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರನ್ನು ವಾರದಲ್ಲಿ ಮೂರು ದಿನ ಬೇರೆ ಕಾಲೇಜುಗಳಿಗೆ ನಿಯೋಜಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸೇವಾ ಸಮಿತಿಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲ್ಲಾವಲಿ ಗಬ್ಬೂರು ಒತ್ತಾಯಿಸಿದರು.
ಈ ಕುರಿತು ಅಪರ ಜಿಲ್ಲಾಧಿಕಾರಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ ಅವರು, ಉಪನ್ಯಾಸಕರ ನಿಯೋಜನೆಯಿಂದ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಅಡಚಣೆಯಾಗುತ್ತಿದೆ ಎಂದು ಗಮನ ಸೆಳೆದರು.
ಗಬ್ಬೂರು ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಕಳೆದ ಮೂರು ದಶಕಗಳಿಂದ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿದೆ. ಈಗಾಗಲೇ ಉಪನ್ಯಾಸಕರ ಕೊರತೆ ಎದುರಿಸುತ್ತಿರುವ ಕಾಲೇಜಿನಿಂದ ಇಬ್ಬರು ಉಪನ್ಯಾಸಕರನ್ನು ಬೇರೆಡೆ ನಿಯೋಜಿಸಿರುವುದು ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ ಎಂದು ದೂರಿದರು.
ಕಾಲೇಜಿನಲ್ಲಿ ನಾಲ್ವರು ಖಾಯಂ ಹಾಗೂ ಇಬ್ಬರು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜಶಾಸ್ತ್ರ ಉಪನ್ಯಾಸಕ ಮಲ್ಲಿಕಾರ್ಜುನ ಮತ್ತು ಅರ್ಥಶಾಸ್ತ್ರ ಉಪನ್ಯಾಸಕ ಮಲ್ಲಪ್ಪ ಅವರನ್ನು ವಾರದಲ್ಲಿ ಮೂರು ದಿನ ಇತರ ಕಾಲೇಜುಗಳಿಗೆ ನಿಯೋಜಿಸಿರುವುದರಿಂದ ಪಠ್ಯಕ್ರಮ ಪೂರ್ಣಗೊಳಿಸಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ಪ್ರಥಮ ಪಿಯುಸಿಯ 77 ಹಾಗೂ ದ್ವಿತೀಯ ಪಿಯುಸಿಯ 51 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 128 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಮುಖ ವಿಷಯಗಳ ಬೋಧನೆಗೆ ಅಡ್ಡಿಯಾಗುತ್ತಿರುವುದು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಇಬ್ಬರು ಉಪನ್ಯಾಸಕರ ನಿಯೋಜನೆ ರದ್ದುಗೊಳಿಸಿ ಪೂರ್ಣಾವಧಿಗೆ ಗಬ್ಬೂರು ಕಾಲೇಜಿನಲ್ಲಿಯೇ ಸೇವೆ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು. ಇತರ ಕಾಲೇಜುಗಳ ಅಗತ್ಯಕ್ಕೆ ಪರ್ಯಾಯ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು. ಬಾಕಿ ಉಳಿದಿರುವ ಪಠ್ಯಕ್ರಮ ಪೂರ್ಣಗೊಳಿಸಲು ವಿಶೇಷ ತರಗತಿಗಳನ್ನು ಆಯೋಜಿಸಬೇಕು ಎಂದು ಆಗ್ರಹಿಸಿದರು.
ನವೆಂಬರ್ 13ರೊಳಗೆ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಶಾಂತಿಯುತ ಪ್ರತಿಭಟನೆ, ರಸ್ತೆ ತಡೆ ಸೇರಿದಂತೆ ಪ್ರಜಾಸತ್ತಾತ್ಮಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಲ್ಲಾವಲಿ ಗಬ್ಬೂರು ಎಚ್ಚರಿಸಿದರು.



