ರಾಯಚೂರು: ತಿಡಿಗೋಳ ಗ್ರಾಮದ ಆಂಜನೇಯ ಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ಯುವಕರ ನಡುವೆ ನಡೆದ ಸಣ್ಣಪುಟ್ಟ ವಾಗ್ವಾದವನ್ನು ಅನಗತ್ಯವಾಗಿ ದೊಡ್ಡ ವಿವಾದವನ್ನಾಗಿ ಬಿಂಬಿಸಿ, ಗ್ರಾಮದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಗ್ರಾಮದ ಮುಖಂಡ ಅಮರೇಶ ಗಚ್ಚಿನಮನೆ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಡಿಗೋಳ ಗ್ರಾಮದಲ್ಲಿ ವಿವಿಧ ಸಮುದಾಯಗಳ ಜನರು ಹಲವು ವರ್ಷಗಳಿಂದ ಪರಸ್ಪರ ಸಹಕಾರ, ವಿಶ್ವಾಸ ಹಾಗೂ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಯಾವುದೇ ಸಮುದಾಯದವರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದ ಘಟನೆ ನಡೆದಿಲ್ಲ. ಆದರೆ ಜಾತ್ರೆಯ ಸಂದರ್ಭದಲ್ಲಿ ಉಂಟಾದ ಸಣ್ಣ ಭಿನ್ನಾಭಿಪ್ರಾಯಕ್ಕೆ ಕೋಮು ಸ್ವರೂಪ ನೀಡುವ ಮೂಲಕ ಗ್ರಾಮಸ್ಥರ ನಡುವೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.

ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಮೂರು ದಿನಗಳ ಕಾಲ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಜಾತಿ, ಸಮುದಾಯಗಳ ಭೇದವಿಲ್ಲದೆ ಎಲ್ಲರೂ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಯ ಅಂಗವಾಗಿ ನಡೆಯುವ ಪ್ರಸಾದ ವಿತರಣೆಯ ಸಂದರ್ಭದಲ್ಲಿಯೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆಯೇ ಹೊರತು ಯಾವುದೇ ಸಮುದಾಯದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಲವು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ರಥೋತ್ಸವವು ವಿಜೃಂಭಣೆಯಿಂದ ನೆರವೇರಿದೆ. ರಥೋತ್ಸವ ಮುಕ್ತಾಯಗೊಂಡ ನಂತರ ಎರಡು ಸಮುದಾಯಗಳ ಯುವಕರ ನಡುವೆ ಡ್ರಮ್ ಬಾರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ಉಂಟಾಗಿತ್ತು. ಈ ಸಂದರ್ಭದಲ್ಲಿ ಯುವಕರ ನಡುವೆ ಪರಸ್ಪರ ತಳ್ಳಾಟ ನಡೆದಿದ್ದು, ಗ್ರಾಮದ ಹಿರಿಯರು ಹಾಗೂ ಸಮುದಾಯದ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದರು.

ಯುವಕರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಇಡೀ ಗ್ರಾಮದ ಸಮಸ್ಯೆಯಂತೆ ಬಿಂಬಿಸುವುದು ಸರಿಯಲ್ಲ. ಸಣ್ಣ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಪ್ರಯತ್ನಗಳು ನಡೆಯಬಾರದು. ಗ್ರಾಮದಲ್ಲಿ ಈ ಹಿಂದಿನಿಂದಲೂ ಇರುವ ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಎರಡೂ ಗುಂಪುಗಳಿಂದ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕು. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ನಮ್ಮ ಯಾವುದೇ ಆಕ್ಷೇಪವಿಲ್ಲ. ಆದರೆ ಘಟನೆಯ ಸತ್ಯಾಸತ್ಯತೆ ತಿಳಿಯದೆ ಗ್ರಾಮದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವುದು ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ತಿಡಿಗೋಳ ಗ್ರಾಮದಲ್ಲಿ ಎಲ್ಲ ಸಮುದಾಯಗಳ ಜನರು ಪರಸ್ಪರ ಗೌರವದಿಂದ ಬದುಕುತ್ತಿದ್ದು, ಮುಂದೆಯೂ ಇದೇ ರೀತಿಯ ಶಾಂತಿ ಮತ್ತು ಸಾಮರಸ್ಯದ ವಾತಾವರಣ ಮುಂದುವರಿಯಬೇಕು. ಯಾವುದೇ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡದೆ ಗ್ರಾಮದ ಏಕತೆ ಕಾಪಾಡಿಕೊಳ್ಳಲು ಸಹಕರಿಸಬೇಕು ಎಂದು ಅಮರೇಶ ಗಚ್ಚಿನಮನೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಶಿವಪುತ್ರಯ್ಯ ಸ್ವಾಮಿ, ಕೆ. ಶರಣಪ್ಪ, ಅಮರೇಗೌಡ, ಶೇಖರಪ್ಪ, ಆದಪ್ಪ ಗುಡದೂರ, ವೆಂಕನಗೌಡ ಪೊಲೀಸ್ ಪಾಟೀಲ್ ಹಾಗೂ ವೆಂಕಣ್ಣ ಜಿನ್ನದ ಉಪಸ್ಥಿತರಿದ್ದರು.