ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ 14ನೇ ಚಾತುರ್ಮಾಸ್ಯ ವ್ರತದ ಸಮಾರೋಪ ಸಮಾರಂಭವು ಶ್ರೀಮಠದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ನೆರವೇರಿತು.

ಚಾತುರ್ಮಾಸ್ಯ ಸಮಾರೋಪದ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬೆಳಗ್ಗೆ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಬ್ರಹ್ಮಕರಾರ್ಚಿತ ಮೂಲ ರಾಮದೇವರ ಪೂಜೆಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಿದರು.

ಬಳಿಕ ಚಾತುರ್ಮಾಸ್ಯ ದೀಕ್ಷೆಯ ಸಮಾರೋಪದ ಅಂಗವಾಗಿ ಶಾಸ್ತ್ರೋಕ್ತ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶ್ರೀಪಾದಂಗಳವರು ವಿಶೇಷ ಪೂಜೆ, ಅರ್ಚನೆ ಹಾಗೂ ಮಂಗಳಾರತಿ ಸಲ್ಲಿಸುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಸಂಪನ್ನಗೊಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮಠದ ಪ್ರವಚನ ಮಂಟಪದಲ್ಲಿ ನಡೆಯುತ್ತಿದ್ದ ಶ್ರೀಮದ್ಭಾಗವತ ಸಪ್ತಾಹದ ಮಂಗಳ ಕಾರ್ಯಕ್ರಮವೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಚಾತುರ್ಮಾಸ್ಯ ಸಮಾರೋಪ ಹಾಗೂ ಶ್ರೀಮದ್ಭಾಗವತ ಸಪ್ತಾಹ ಮಂಗಳದ ಹಿನ್ನೆಲೆಯಲ್ಲಿ ಶ್ರೀಮಠದ ಆವರಣದಲ್ಲಿ ವಿಶೇಷ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು.