ರಾಯಚೂರು, ಸೆ.21: ದೇವರಾಜು ಅರಸು ವಿಶೇಷ ವರ್ಗ ಯೋಜನೆಯಡಿ ನಿವೇಶನ ಕೋರಿ ಸಲ್ಲಿಸಿರುವ 1,635 ಫಲಾನುಭವಿಗಳ ಅರ್ಜಿಗಳನ್ನು ತಕ್ಷಣ ಪರಿಶೀಲಿಸಿ, ಒಂದು ವಾರದೊಳಗೆ ಜಿಲ್ಲಾಡಳಿತಕ್ಕೆ ರವಾನಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬಕ್ಕೆ ಕಾರಣವಾಗಿರುವ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿಧವೆಯರು, ವಿಧುರರು, ಮನೆಗೆಲಸ ಮಾಡುವ ಮಹಿಳೆಯರು, ಅಂಗವಿಕಲರು, ತರಕಾರಿ ಹಾಗೂ ಬೀದಿ ಬದಿ ವ್ಯಾಪಾರಿಗಳು, ಸಫಾಯಿ ಕರ್ಮಚಾರಿಗಳು, ಅಲೆಮಾರಿ ಸಮುದಾಯದವರು, ದೇವದಾಸಿ ಮಹಿಳೆಯರು ಸೇರಿದಂತೆ ವಿಶೇಷ ವರ್ಗಕ್ಕೆ ಸೇರಿದವರು ನಿವೇಶನಕ್ಕಾಗಿ ದೇವರಾಜು ಅರಸು ವಿಶೇಷ ವರ್ಗ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಗಳನ್ನು ಸಲ್ಲಿಸಿ ಸುಮಾರು ಎರಡು ವರ್ಷ ಕಳೆದಿದ್ದರೂ ಅವುಗಳ ಪರಿಶೀಲನೆ ಪೂರ್ಣಗೊಳಿಸಿ ಜಿಲ್ಲಾಡಳಿತಕ್ಕೆ ಕಳುಹಿಸುವ ಕಾರ್ಯ ನಡೆದಿಲ್ಲ. ಆಶ್ರಯ ಯೋಜನೆಗೆ ಸಂಬಂಧಿಸಿದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಫಲಾನುಭವಿಗಳು ಅನಗತ್ಯವಾಗಿ ಕಾಯುವಂತಾಗಿದೆ ಎಂದು ಮುಖಂಡರು ದೂರಿದ್ದಾರೆ.

ಈ ಕುರಿತು ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದರೂ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪಾಲಿಕೆ ಸಿಬ್ಬಂದಿಯಿಂದ ಮಾಹಿತಿ ಕೇಳಿದಾಗ, ವಿಧವೆಯರಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲನೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಅಲ್ಲಿಂದ ಅವು ಮರಳಿ ಬಂದಿಲ್ಲ ಎಂಬ ಉತ್ತರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಭಾಗಗಳ ನಡುವಿನ ಪತ್ರವ್ಯವಹಾರ ಹಾಗೂ ಆಡಳಿತಾತ್ಮಕ ವಿಳಂಬದಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದು. ಯೋಜನೆಯಡಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಅರ್ಹರ ಪಟ್ಟಿಯನ್ನು ಅಂತಿಮಗೊಳಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವಾರದೊಳಗೆ 1,635 ಫಲಾನುಭವಿಗಳ ಅರ್ಜಿಗಳ ಕುರಿತು ಕ್ರಮ ಕೈಗೊಂಡು ಜಿಲ್ಲಾಡಳಿತಕ್ಕೆ ಪಟ್ಟಿ ರವಾನಿಸಬೇಕು. ಜತೆಗೆ ವಿಳಂಬಕ್ಕೆ ಹೊಣೆಗಾರರಾದ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಬಸವರು ಹೊಸೂರು, ರಾಜಶೇಖರ್, ನೂರ್ ಜಾನ್, ನಾಗರಾಜ ಎಸ್., ಮಹೇಶ್, ಅಂಜಿನಯ್ಯ, ಶರಣಬಸವ, ಪವನ್, ಜನಾರ್ಧನ ಹಳಿಬೆಂಚಿ, ರಾಜಶೇಖರ್, ಜಂಬಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.