ಲಿಂಗಸುಗೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2026ನೇ ಸಾಲಿನಲ್ಲಿ ಕೈಗೊಂಡ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,25,916 ಮತದಾರರನ್ನು ಒಳಗೊಂಡ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ನಾಗೇಂದ್ರ ಬಾಬು ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ಷೇತ್ರದಲ್ಲಿ ಒಟ್ಟು 294 ಮತಗಟ್ಟೆಗಳಿದ್ದು, 1,12,841 ಪುರುಷ ಮತದಾರರು, 1,13,064 ಮಹಿಳಾ ಮತದಾರರು ಹಾಗೂ 11 ತೃತೀಯ ಲಿಂಗದ ಮತದಾರರು ಸೇರಿದಂತೆ ಒಟ್ಟು 2,25,916 ಮತದಾರರು ಅಂತಿಮ ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೊಸದಾಗಿ 3,250 ಯುವ ಮತದಾರರು ನೋಂದಣಿಯಾಗಿರುವುದಾಗಿ ತಿಳಿಸಿದ್ದಾರೆ.
2025ರಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ 285 ಮತಗಟ್ಟೆಗಳಿದ್ದು, ಒಟ್ಟು 2,73,705 ಮತದಾರರು ನೋಂದಣಿಯಾಗಿದ್ದರು. 2026ರ ವಿಶೇಷ ತೀವ್ರ ಪರಿಷ್ಕರಣೆ ಅಂಗವಾಗಿ ಚುನಾವಣಾ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಿದ ನಂತರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 2,22,666 ಮತದಾರರಿದ್ದರು.
ಬಳಿಕ ಮತದಾರರ ಪಟ್ಟಿಗೆ ಸಂಬಂಧಿಸಿದ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 2,25,916ಕ್ಕೆ ಏರಿಕೆಯಾಗಿದೆ. ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 3,250 ಮತದಾರರು ಹೆಚ್ಚಾಗಿದ್ದಾರೆ.
ಇನ್ನು ಮತಗಟ್ಟೆಗಳ ಪುನರ್ವಿಂಗಡಣೆಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 1,200ಕ್ಕಿಂತ ಹೆಚ್ಚು ಮತದಾರರಿರುವ ಅಥವಾ ಮತದಾರರು ಎರಡು ಕಿಲೋಮೀಟರ್ಗಿಂತ ಹೆಚ್ಚಿನ ದೂರ ಕ್ರಮಿಸಬೇಕಾದ ಪರಿಸ್ಥಿತಿಯಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ ಒಂಬತ್ತು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಹಿಂದೆ ಇದ್ದ 285 ಮತಗಟ್ಟೆಗಳ ಸಂಖ್ಯೆ ಈಗ 294ಕ್ಕೆ ಏರಿಕೆಯಾಗಿದೆ ಎಂದು ನಾಗೇಂದ್ರ ಬಾಬು ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



